ADVERTISEMENT

ಪರಿಷತ್‌ ನಾಮನಿರ್ದೇಶನ: ಸಿಎಂಗೆ ‘ಸ್ವಾತಂತ್ರ್ಯ’

ರಾಹುಲ್‌ ಜತೆಗೆ ಸಮಾಲೋಚಿಸಿದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 0:30 IST
Last Updated 4 ಏಪ್ರಿಲ್ 2025, 0:30 IST
ರಾಹುಲ್‌ ಗಾಂಧಿ ಹಾಗೂ ಸಿದ್ದರಾಮಯ್ಯ ಹಸ್ತಲಾಘವ ಮಾಡಿದರು. 
ರಾಹುಲ್‌ ಗಾಂಧಿ ಹಾಗೂ ಸಿದ್ದರಾಮಯ್ಯ ಹಸ್ತಲಾಘವ ಮಾಡಿದರು.    

ನವದೆಹಲಿ: ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಗುರುವಾರ ಸಮಾಲೋಚಿಸಿದರು.

ಇದೇ ವೇಳೆ, ಕಾಂಗ್ರೆಸ್‌ ವಲಯದಲ್ಲಿ ತಲ್ಲಣ ಸೃಷ್ಟಿಸಿರುವ ‘ಮಧುಬಲೆ ಪ್ರಕರಣ’ದ ಕುರಿತು ರಾಹುಲ್‌ ಅವರಿಗೆ ಮುಖ್ಯಮಂತ್ರಿ ವಿವರಣೆ ನೀಡಿದರು. ಈ ಪ್ರಕರಣದಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ರಾಹುಲ್ ಅಸಮಾಧಾನ ವ್ಯಕ್ತಪಡಿಸಿದರು. 

‘ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನೂರಕ್ಕೂ ಅಧಿಕ ಆಕಾಂಕ್ಷಿಗಳಿದ್ದಾರೆ. ಸದಸ್ಯರ ಆಯ್ಕೆ ಸಂದರ್ಭದಲ್ಲಿ ಜಾತಿ ಸಮೀಕರಣಕ್ಕೆ ಒತ್ತು ನೀಡಬೇಕಿದೆ. ಈ ಹಿಂದೆ ಅವಕಾಶ ಸಿಗದ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಬೇಕಿದೆ. ಸಣ್ಣ ಸಣ್ಣ ಸಮುದಾಯಗಳಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಬಲವಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪಟ್ಟಿ ಸಿದ್ಧಪಡಿಸಲಾಗುವುದು. ಈ ವಿಷಯದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು’ ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ಪರಿಷತ್‌ ಸದಸ್ಯರ ನಾಮನಿರ್ದೇಶನ ವಿಷಯದಲ್ಲಿ ಹೈಕಮಾಂಡ್‌ ಹಸ್ತಕ್ಷೇಪ ಮಾಡುವುದಿಲ್ಲ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌ ಜತೆಗೆ ಚರ್ಚಿಸಿ ಪಟ್ಟಿ ಅಂತಿಮಗೊಳಿಸಿ. ಆ ಪಟ್ಟಿಗೆ ಶೀಘ್ರ ಅನುಮೋದನೆ ನೀಡಲಾಗುವುದು’ ಎಂದು ರಾಹುಲ್‌ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ. 

ADVERTISEMENT

ಬಳಿಕ ಸಿದ್ದರಾಮಯ್ಯ ಅವರು ವೇಣುಗೋಪಾಲ್ ಅವರನ್ನು ಭೇಟಿ ಮಾಡಿದರು. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಿದ್ದರಾಮಯ್ಯ ಸಮಾಲೋಚಿಸಿ ಪಟ್ಟಿ ಆಖೈರುಗೊಳಿಸುವರು. ನವದೆಹಲಿಯಲ್ಲಿ ಉಭಯ ನಾಯಕರು ಶುಕ್ರವಾರ ಈ ಸಂಬಂಧ ಚರ್ಚೆ ನಡೆಸುವ ಸಾಧ್ಯತೆ ಇದೆ. 

ಆಕಾಂಕ್ಷಿಗಳ ಲಾಬಿ:

ಪರಿಷತ್‌ ಸದಸ್ಯರಾಗಲು ಕಾಂಗ್ರೆಸ್‌ನಲ್ಲಿ ಸುಮಾರು 200 ಮಂದಿ ಆಕಾಂಕ್ಷಿಗಳಿದ್ದಾರೆ. ಬಹುತೇಕ ಆಕಾಂಕ್ಷಿಗಳು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರನ್ನು ಈ ಹಿಂದೆ ಭೇಟಿ ಮಾಡಿ ತಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿಕೊಂಡಿದ್ದರು. ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಎರಡು ದಿನಗಳಿಂದ ಠಿಕಾಣಿ ಹೂಡಿರುವ 50ಕ್ಕೂ ಅಧಿಕ ಆಕಾಂಕ್ಷಿಗಳು ಉಭಯ ನಾಯಕರನ್ನು ಭೇಟಿ ಮಾಡಿ ಲಾಬಿ ನಡೆಸಿದರು. ‘ನಿಮ್ಮ ಸಮುದಾಯಕ್ಕೆ ಅವಕಾಶ ನೀಡುವ ಬಗ್ಗೆ ತೀರ್ಮಾನವಾದರೆ ನಿಮ್ಮನ್ನೇ ಪರಿಗಣಿಸಲಾಗುವುದು’ ಎಂದು ಹಲವು ಆಕಾಂಕ್ಷಿಗಳಿಗೆ ಮುಖ್ಯಮಂತ್ರಿ ಭರವಸೆ ನೀಡಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.