ADVERTISEMENT

ಆಸ್ತಿ ನೋಂದಣಿ: ಜಿಪಿಎ ವಂಚನೆಗೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 23:14 IST
Last Updated 29 ಜುಲೈ 2025, 23:14 IST
<div class="paragraphs"><p>ಆಸ್ತಿ ನೋಂದಣಿ </p></div>

ಆಸ್ತಿ ನೋಂದಣಿ

   

ಬೆಂಗಳೂರು: ನೋಂದಣಿ ಇಲ್ಲದೇ ಜಿಪಿಎ (ಜನರಲ್‌ ಪವರ್‌ ಆಫ್‌ ಅಟಾರ್ನಿ) ಆಧಾರದಲ್ಲಿ ನಡೆಯುತ್ತಿದ್ದ ಆಸ್ತಿ ವ್ಯವಹಾರ, ಜಿಪಿಎ ದುರ್ಬಳಕೆಗೆ ಕಡಿವಾಣ ಬೀಳಲಿದೆ. ಜಿಪಿಎ ಆಧಾರಿತ ಆಸ್ತಿ ವರ್ಗಾವಣೆ ವಹಿವಾಟುಗಳಿಗೂ ಇನ್ನು ಮುಂದೆ ನೋಂದಣಿ ಕಡ್ಡಾಯವಾಗಲಿದೆ. 

ರಾಜ್ಯ ವಿಧಾನಮಂಡಲ ಅಂಗೀಕರಿಸಿದ್ದ ಸ್ಥಿರಾಸ್ತಿ ನೋಂದಣಿ ಹಾಗೂ ಡಿಜಿಟಲ್‌ ವಹಿವಾಟಿಗೆ ಸಂಬಂಧಿಸಿದಂತೆ ಕರ್ನಾಟಕ ನೋಂದಣಿ ಕಾಯ್ದೆಗಳ (ತಿದ್ದುಪಡಿ) ಎರಡು ಮಸೂದೆಗಳಿಗೆ ರಾಷ್ಟ್ರಪತಿ ಅನುಮೋದನೆ ಸಿಕ್ಕಿದ್ದು, ಹೊಸ ಕಾನೂನು ಜಾರಿಗೆ ಬಂದಿದೆ.

ADVERTISEMENT

ಭೂರಹಿತರಿಗೆ ಸರ್ಕಾರ ಮಂಜೂರು ಮಾಡುವ ನಿವೇಶನ, ಮನೆ, ಜಮೀನು, ಗೃಹ ನಿರ್ಮಾಣ ಮಂಡಳಿ, ನಗರಾಭಿವೃದ್ಧಿ ಪ್ರಾಧಿಕಾರಗಳು ನಿರ್ಮಿಸುವ ಬಡಾವಣೆಗಳಲ್ಲಿನ ನಿವೇಶನ, ಮನೆಗಳ ನೋಂದಣಿಯನ್ನೂ ಕಡ್ಡಾಯಗೊಳಿಸಲಾಗಿದೆ. ಇದುವರೆಗೆ ಹಕ್ಕುಪತ್ರಗಳ ಆಧಾರದಲ್ಲೇ ಹೆಚ್ಚಿನ ಪ್ರಕ್ರಿಯೆಗಳು ನಡೆಯುತ್ತಿದ್ದವು. 

ಮತ್ತೊಂದು ತಿದ್ದುಪಡಿ ಕಾಯ್ದೆ ಪ್ರಕಾರ ಸ್ವತ್ತು ಮತ್ತು ಇತರ ನೋಂದಣಿಗಳಲ್ಲಿ ಡಿಜಿಟಲ್‌ ಸಹಿ, ಡಿಜಿಟಲ್‌ ಇ–ಸ್ಟಾಂಪ್‌ ಬಳಕೆ ಜಾರಿ ಕಡ್ಡಾಯವಾಗಲಿದೆ. ಈ ಹಿಂದಿನಂತೆ ಅಂಟಿಸುವ ಅಥವಾ ಮುದ್ರೆ ಹಾಕುವ ಸ್ಟಾಂಪ್‌ಗಳ ಬಳಕೆಯನ್ನು ನಿಲ್ಲಿಸಲಾಗುತ್ತದೆ.ಇ–ಸ್ಟಾಂಪ್‌ ದುರುಪಯೋಗವನ್ನು ತಡೆಯಲು ಸ್ಟಾಂಪ್‌ ಮೊತ್ತವನ್ನು ವಿದ್ಯುನ್ಮಾನ ಪಾವತಿ ಮಾಡಬೇಕಿದೆ. ಸಿಬ್ಬಂದಿ ಮೂಲಕ (ಮ್ಯಾನ್ಯುವಲ್) ಸ್ಟಾಂಪ್‌ ವಿತರಿಸುವುದು ಸಂಪೂರ್ಣ ಸ್ಥಗಿತವಾಗಲಿದೆ.

ಡಿಜಿಟಲ್‌ ಸಹಿ ದುರುಪಯೋಗ ಆಗದಂತೆ ಮಾಡಲು ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರದ ಅಧಿಕಾರಿಯ ಸಹಿಯನ್ನು ಆಧಾರ್‌ಗೆ ಜೋಡಣೆ ಮಾಡಲಾಗಿರುತ್ತದೆ. ಸಹಿ ದೃಢೀಕರಣಗೊಂಡರೆ ಮಾತ್ರ ಸಹಿ ಸಾಧ್ಯ. ಡಿಜಿಟಲ್‌ ಸಹಿಯಲ್ಲಿ ಬಯೋಮೆಟ್ರಿಕ್‌ ಕೂಡ ಇರುತ್ತದೆ. ಎರಡೂ ಕಾಯ್ದೆ ಜಾರಿ ಕುರಿತು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.