ADVERTISEMENT

ಜಲಾಶಯ: ಒಳಹರಿವು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 18:09 IST
Last Updated 8 ಜುಲೈ 2022, 18:09 IST

ಬೆಂಗಳೂರು: ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ, ರಾಜ್ಯದ ಅಣೆಕಟ್ಟುಗಳಿಗೆ ಒಳಹರಿವು ಹೆಚ್ಚಾಗಿದೆ.

ವಿಜಯನಗರ ಜಿಲ್ಲೆ ಹೊಸಪೇಟೆ ಬಳಿಯ ತುಂಗಭದ್ರಾ ನದಿ ನೀರಿನ ಮಟ್ಟ ಹೆಚ್ಚಾಗಿದೆ.ಶುಕ್ರವಾರ 75,843 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಹಡಗಲಿ ತಾಲ್ಲೂಕಿನ ಸಿಂಗಟಾಲೂರು ಬ್ಯಾರೇಜ್‌ ಭರ್ತಿಯಾಗಿದೆ. 16 ಕ್ರಸ್ಟ್‌ಗೇಟ್‌ಗಳ ಮೂಲಕ 75,000 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ತಾಲ್ಲೂಕಿನ ಕುರುವತ್ತಿ, ಅಂಗೂರು, ಮದಲಗಟ್ಟಿ ಗ್ರಾಮದ ಕೆಲವು ಕುಟುಂಬಗಳಕ್ಕೆ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಿದ್ದರಿಂದ, ವಿಜಯಪುರದ ಆಲಮಟ್ಟಿ ಜಲಾಶಯಕ್ಕೆ ಶುಕ್ರವಾರ ಒಂದೇ ದಿನ 75,207 ಕ್ಯುಸೆಕ್ ನೀರು ಹರಿದು ಬಂದಿದೆ.

ADVERTISEMENT

ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯಕ್ಕೂ ನೀರಿನ ಹರಿವು ಹೆಚ್ಚಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 28 ಸಾವಿರ ಕ್ಯುಸೆಕ್ ನೀರನ್ನು ಕಾಳಿ ನದಿಗೆ ಹರಿಸಲಾಗಿದೆ. ಚಿಕ್ಕೋಡಿ ತಾಲ್ಲೂಕಿನ ಯಡೂರ- ಕಲ್ಲೋಳ, ಮಾಂಜರಿ- ಬಾವನಸೌಂದತ್ತಿ, ಮಲಿಕವಾಡ- ದತ್ತವಾಡ, ಯಕ್ಸಂಬಾ- ದಾನವಾಡ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಕೃಷ್ಣಾ ನದಿಗೆ ಕಲ್ಲೋಳ ಸೇತುವೆ ಬಳಿ 71,293 ಕ್ಯುಸೆಕ್‌ ನೀರು ಹರಿಯುತ್ತಿದೆ. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಜೊಯಿಡಾ ತಾಲ್ಲೂಕಿನ ಕ್ಯಾಸಲ್‌ರಾಕ್ ಭಾಗದಲ್ಲಿ ಜೋರಾಗಿ ವರ್ಷಧಾರೆಯಾಗಿದ್ದು, ಸೂಪಾ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ.

ಮಲೆನಾಡು ಭಾಗಗಳಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ತುಂಗಾ, ಭದ್ರಾ, ಶರಾವತಿ, ವರದಾ ನದಿಗಳಲ್ಲಿ ಒಳಹರಿವು ಹೆಚ್ಚಾಗಿದೆ. ತುಂಗಾ ಜಲಾಶಯದಿಂದ ನದಿಗೆ 55,770 ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಶರಾವತಿ ನದಿಗೆ 56,645 ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಲಿಂಗನಮಕ್ಕಿ ಜಲಾಶಯದಲ್ಲಿ 24 ಗಂಟೆಗಳಲ್ಲಿ ಮೂರು ಅಡಿ ನೀರು ಸಂಗ್ರಹವಾಗಿದೆ.

ಭದ್ರಾ ಜಲಾಶಯದ ನೀರಿನ ಮಟ್ಟ 166.4 ಅಡಿಗೆ ಏರಿಕೆಯಾಗಿದ್ದು, ಜುಲೈ 10ರಿಂದ ಕಾಲುವೆಗೆ ನೀರು ಹರಿಸಲು ಕಾಡಾ ಸಮಿತಿ ತೀರ್ಮಾನಿಸಿದೆ.

ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ವಾಟೆಹೊಳೆ ಜಲಾಶಯ ಭರ್ತಿಗೆ ಇನ್ನೆರಡು ಅಡಿ ಬಾಕಿ ಇದೆ. ಹೇಮಾವತಿ ಜಲಾಶಯ ಭರ್ತಿಗೆ 6 ಅಡಿ ಬಾಕಿ ಇದ್ದು, ಯಾವುದೇ ಸಂದರ್ಭದಲ್ಲಿ ನದಿಗೆ ನೀರು ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಗಚಿ ಜಲಾಶಯದಿಂದ ಈಗಾಗಲೇ 3 ಸಾವಿರ ಕ್ಯುಸೆಕ್‌ ನೀರು ನದಿಗೆ ಬಿಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.