ADVERTISEMENT

Karnataka Rains | ಇಳೆಗೆ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2023, 16:04 IST
Last Updated 5 ಸೆಪ್ಟೆಂಬರ್ 2023, 16:04 IST
ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಸಮೀಪದ ಕಾಳಘಟ್ಟ ಗ್ರಾಮದ ಬಳಿಯ ಐನಹಳ್ಳಿ ಹಳ್ಳ ತುಂಬಿ ಹರಿಯುತ್ತಿರುವುದು
ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಸಮೀಪದ ಕಾಳಘಟ್ಟ ಗ್ರಾಮದ ಬಳಿಯ ಐನಹಳ್ಳಿ ಹಳ್ಳ ತುಂಬಿ ಹರಿಯುತ್ತಿರುವುದು   

ಬೆಂಗಳೂರು: ರಾಜ್ಯದ ಉತ್ತರ, ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಂಗಳವಾರ ಮಳೆಯಾಗಿದ್ದು, ಭೂಮಿಗೆ ತಂಪೆರೆದಿದೆ. ದಕ್ಷಿಣ ಕನ್ನಡ, ದಾವಣಗೆರೆ, ಬೆಂಗಳೂರು, ಚಿತ್ರದುರ್ಗ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಉಳಿದೆಡೆ ಸಾಧಾರಣ ಮಳೆ ಸುರಿದಿದೆ.

ಬೆಂಗಳೂರು ನಗರದಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಭಾರೀ ಮಳೆಯಿಂದ ಪ್ರಮುಖ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು. ಕೆಳಸೇತುವೆಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು, ವಾಹನ ಸವಾರರು ತೊಂದರೆ ಅನುಭವಿಸಿದರು. ರಾತ್ರಿ ಮಳೆಯ ಅಬ್ಬರ ಜೋರಾಗಿತ್ತು. ಬಸವನಗುಡಿ, ಬನಶಂಕರಿ, ಜಯನಗರ, ಮಡಿವಾಳ, ಚಿಕ್ಕಪೇಟೆ, ಗಾಂಧಿನಗರ, ಮೆಜೆಸ್ಟಿಕ್, ಶೇಷಾದ್ರಿಪುರ, ಮಲ್ಲೇಶ್ವರ ಭಾಗಗಳಲ್ಲಿ ಭಾರಿ ಮಳೆಯಾಗಿದೆ.

ಕನಕಪುರ ಮುಖ್ಯರಸ್ತೆಯ ಯಶಸ್ವಿ ಶಾಲೆಯ ಬಳಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿದವು. ಹೆಣ್ಣೂರಿನ ಪೂರ್ವಾಂಕರ ಅಪಾರ್ಟ್‌ಮೆಂಟ್‌ ಬಳಿಯ ರಸ್ತೆಯು ಜಲಾವೃತಗೊಂಡು ವಾಹನ ಸಂಚಾರ ಬಂದ್‌ ಆಗಿತ್ತು.

ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ, ಮೂಲ್ಕಿ, ಬಂಟ್ವಾಳ, ಬಜಪೆಯಲ್ಲಿ ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ಅಜ್ಜಂಪುರ, ನರಸಿಂಹರಾಜಪುರ, ತರೀಕೆರೆ ಸುತ್ತಮುತ್ತಲೂ ಮಳೆಯಾಗಿದೆ.

ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ಹರಿಹರ, ಚನ್ನಗಿರಿ, ಜಗಳೂರು, ಸಂತೇಬೆನ್ನೂರು, ಮಾಯಕೊಂಡ, ತ್ಯಾವಣಿಗೆ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದರೆ ಮಲೇಬೆನ್ನೂರು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಮಳೆ ಕೊರತೆಯಿಂದಾಗಿ ಬಾಡಲು ಶುರುವಾಗಿದ್ದ  ಮೆಕ್ಕೆ ಜೋಳ ಬೆಳೆಗೆ ಇದರಿಂದ ಅನುಕೂಲವಾಗಲಿದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ.

ಈಗಾಗಲೇ ಬೆಳೆ ನಾಶದಿಂದ ಕಂಗೆಟ್ಟು, ಹಿಂಗಾರು ಬೆಳೆಗಳಾದ ಜೋಳ, ಸೂರ್ಯಕಾಂತಿ, ಕಡಲೆ, ಅಲಸಂದೆಯತ್ತ ಮುಖ ಮಾಡಿರುವ ರೈತರಿಗೆ ಈಗ ಸುರಿಯುತ್ತಿರುವ ಮಳೆಯಿಂದ ಅನುಕೂಲವಾಗಲಿದೆ. ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಮತ್ತು ಬಿ.ದುರ್ಗ ಭಾಗದಲ್ಲಿ ಉತ್ತಮ ಮಳೆ ಸುರಿದಿದ್ದು, ನಾಯಕನಹಟ್ಟಿ ಭಾಗದಲ್ಲಿ ತುಂತುರು ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗಿದೆ.

ತಗ್ಗಿದ ಮಳೆ:

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಮಂಗಳವಾರ ಮಳೆ ಪ್ರಮಾಣ ತಗ್ಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ಕಾಣಿಗಾ ನದಿಯ ಪ್ರವಾಹ ಕಡಿಮೆಯಾಗಿದ್ದು, ಸೇತುವೆಯು ಸಂಚಾರಕ್ಕೆ ಮುಕ್ತವಾಗಿದೆ.

ಬೀದರ್‌ ಜಿಲ್ಲೆಯಾದ್ಯಂತ ಬುಧವಾರ ಸತತ ಮೂರನೇ ದಿನವೂ ಉತ್ತಮ ವರ್ಷಧಾರೆಯಾಗಿದೆ. ಭಾಲ್ಕಿ ತಾಲ್ಲೂಕಿನ ಚಳಕಾಪುರದಲ್ಲಿ ಮನೆಯ ಚಾವಣಿ ಕುಸಿದು ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.