ADVERTISEMENT

Karnataka Rains | ಮಳೆ: ನಲುಗಿದ ಕಾಫಿನಾಡು

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 0:00 IST
Last Updated 31 ಜುಲೈ 2024, 0:00 IST
<div class="paragraphs"><p>ಭಾಗಮಂಡಲದ ಭಗಂಡೇಶ್ವರ ದೇಗುಲದ ಮೆಟ್ಟಿಲುಗಳು ನದಿ ನೀರಿನ ಪ್ರವಾಹದಿಂದ ಮುಳುಗಡೆಯಾಗಿವೆ</p></div>

ಭಾಗಮಂಡಲದ ಭಗಂಡೇಶ್ವರ ದೇಗುಲದ ಮೆಟ್ಟಿಲುಗಳು ನದಿ ನೀರಿನ ಪ್ರವಾಹದಿಂದ ಮುಳುಗಡೆಯಾಗಿವೆ

   

ಚಿಕ್ಕಮಗಳೂರು/ಮಂಗಳೂರು: ಸೋಮವಾರ ರಾತ್ರಿ ಅಬ್ಬರಿಸಿದ ಮಳೆಗೆ ಕಾಫಿನಾಡು ನಲುಗಿದೆ. ತುಂಗಾ ಮತ್ತು ಭದ್ರಾ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವು ರಸ್ತೆಗಳು ಸಂಪರ್ಕ ಕಡಿತಗೊಂಡಿವೆ. ಶೃಂಗೇರಿ ಮತ್ತು ಬಾಳೆಹೊನ್ನೂರು ಪಟ್ಟಣಗಳ ಕೆಲ ಪ್ರದೇಶ ಜಲಾವೃತಗೊಂಡಿವೆ.

ಕಳಸ ಪಟ್ಟಣಕ್ಕೆ ಜಲದಿಗ್ಬಂಧನವೇ ಉಂಟಾಗಿದ್ದು, ಕಳಸದಿಂದ ಕುದುರೆಮುಖ, ಹೊರನಾಡು, ಶೃಂಗೇರಿ, ಬಾಳೆಹೊನ್ನೂರು ಸಂಪರ್ಕಿಸುವ ರಸ್ತೆಗಳು ಜಲಾವೃತಗೊಂಡಿವೆ. ಹೊರನಾಡು–ಕಳಸ ಸಂಪರ್ಕಿಸುವ ಹೊಬ್ಬಾಳೆ ಸೇತುವೆ ಸಂಪೂರ್ಣ ಮುಳುಗಿದೆ.

ADVERTISEMENT

ಶೃಂಗೇರಿ ತಾಲ್ಲೂಕಿನ ಮೆಣಸೆ– ಹಾಲಂದೂರು ನಡುವೆ ನಾಲ್ಕು ಕಡೆ ಭೂಕುಸಿತ ಉಂಟಾಗಿದೆ. ನೆಮ್ಮಾರ್ ಬಳಿ ರಸ್ತೆ ಜಲಾವೃತಗೊಂಡು ಶೃಂಗೇರಿ –ಮಂಗಳೂರು ಸಂಪರ್ಕ ಕಡಿತಗೊಂಡಿದೆ. ಪಟ್ಟಣದ ಭಾರತೀತೀರ್ಥ ರಸ್ತೆ, ಗಾಂಧಿ ಮೈದಾನ, ಕುರುಬಗೆರೆ ರಸ್ತೆ ಸಂಪೂರ್ಣ ಜಲಾವೃತಗೊಂಡಿವೆ. ನಡುಗಡ್ಡೆಯಂತಾಗಿದ್ದ ಮನೆಗಳಲ್ಲಿದ್ದ ಜನರನ್ನು ಬೋಟ್‌ಗಳ ಮೂಲಕ ಸುರಕ್ಷಿತ ಪ್ರದೇಶಕ್ಕೆ ಕರೆತರಲಾಗಿದೆ.

ಭದ್ರಾ ನದಿಯ ನೀರು ಉಕ್ಕಿದ್ದು ಬಾಳೆಹೊನ್ನೂರಿನ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸಂತೆ ಮಾರುಕಟ್ಟೆ ಮುಳುಗಡೆಯಾಗಿದೆ. ಕಳಸ–ಬಾಳೆಹೊನ್ನೂರು, ಜಯಪುರ–ಹೊರನಾಡು, ಶೃಂಗೇರಿ–ಕೆರೆಕಟ್ಟೆ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದು, ವಾಹನ ಸಂಚಾರ ಬಂದ್ ಮಾಡಲಾಗಿದೆ. ಎಲ್ಲೆಡೆ ಕಾಫಿ ತೋಟ, ಅಡಿಕೆ ತೋಟಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಇಡೀ ದಿನ ಮಳೆ ಸುರಿಯಿತು. ಅಲ್ಲಲ್ಲಿ ಗುಡ್ಡ ಕುಸಿಯುತ್ತಿದೆ. ಚಾರ್ಮಾಡಿಯಲ್ಲಿ ರಸ್ತೆ ಮೇಲೆ ಮರ ಬಿದ್ದು, ಒಂದು ತಾಸು ಸಂಚಾರ ಸ್ಥಗಿತಗೊಂಡಿತ್ತು. ಕುಕ್ಕೆ ಸುಬ್ರಹ್ಮಣದಲ್ಲಿ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದ್ದು, ಸ್ನಾನಘಟ್ಟ ಮುಳುಗಡೆಯಾಗಿದೆ.

ಉಡುಪಿ ಜಿಲ್ಲೆಯಾದ್ಯಂತ ದಿನವಿಡೀ ಬಿಟ್ಟು ಬಿಟ್ಟು ಧಾರಾಕಾರವಾಗಿ ಸುರಿದಿದೆ.

ದಕ್ಷಿಣ ಕನ್ನಡ ಜಿಲ್ಲೆ ಗುಂಡ್ಯ - ಸುಬ್ರಹ್ಮಣ್ಯ ಹೆದ್ದಾರಿಯ ಚೇರು ಎಂಬಲ್ಲಿ ಶಾಲಾ ವಿದ್ಯಾರ್ಥಿಯನ್ನು ಪೋಷಕರೊಬ್ಬರು ಎತ್ತಿಕೊಂಡು ಮನೆಗೆ ಕರೆದೊಯ್ದರು

ಶಿವಮೊಗ್ಗ ವರದಿ:

ಸತತ ಮಳೆ ಕಾರಣ ತುಂಗಾ, ಭದ್ರಾ, ವರದಾ, ಶರಾವತಿ, ಕುಮದ್ವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ತುಂಗಾ ನದಿಯಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ. ತೀರ್ಥಹಳ್ಳಿಯ ಐತಿಹಾಸಿಕ ರಾಮಮಂಟಪ ಹಾಗೂ ಶಿವಮೊಗ್ಗ ನಗರದ ಕೋರ್ಪಾಲಯ್ಯನ ಛತ್ರಗಳು ಮುಳುಗಿವೆ. ಗಾಜನೂರಿನ ತುಂಗಾ ಜಲಾಶಯಕ್ಕೆ ಒಳಹರಿವು ಮಂಗಳವಾರ ಸಂಜೆ 80,000 ಕ್ಯುಸೆಕ್ ದಾಖಲಾಗಿದೆ. ಜಲಾಶಯ ಭರ್ತಿ ಆಗಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಮಳೆಯ ಆರ್ಭಟ ಹೆಚ್ಚಾಗಿರುವುದರಿಂದ ತುಂಗಾ ನದಿಯಲ್ಲಿ ರಾತ್ರಿ ವೇಳೆಗೆ 90,000 ಕ್ಯುಸೆಕ್ ಒಳಹರಿವು ದಾಖಲಾಗಬಹುದು. ಹೀಗಾಗಿ ಶಿವಮೊಗ್ಗ ನಗರದೊಳಗೆ ನದಿಯ ನೀರು ನುಗ್ಗುವ ಸಾಧ್ಯತೆ ಇದ್ದು, ನದಿ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಮಂಗಳವಾರ ಲಕ್ಕವಳಿಯ ಭದ್ರಾ ಜಲಾಶಯದ ನಾಲ್ಕು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ 40,000 ಕ್ಯುಸೆಕ್ ನೀರು ಹರಿಸಲಾಯಿತು. ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಭದ್ರಾ ಜಲಾಶಯ ಭರ್ತಿ ಆಗಿದೆ.

ಹಾಸನ ವರದಿ:

ಬೇಲೂರು ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಸುಳ್ಳಕ್ಕಿ ಗ್ರಾಮದ ರಸ್ತೆ ಕೊಚ್ಚಿ ಹೋಗಿದ್ದು, ಸುಳ್ಳಕ್ಕಿ–ಮೈಲಹಳ್ಳಿ, ಆಲೂರು–ಬೇಲೂರು–ಕೋನೆರ್ಲು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ನಾಟಿ ಮಾಡಿದ್ದ ಭತ್ತದ ಸಸಿಗಳು ಕೊಚ್ಚಿ ಹೋಗಿವೆ.

ಬೆಳಗಾವಿ ವರದಿ :

ಬೆಳಗಾವಿ ಜಿಲ್ಲೆಯಲ್ಲಿ ಅಲ್ಲದೇ ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಮಂಗಳವಾರ ಮಳೆ ಅಬ್ಬರ ತಗ್ಗಿದೆ. ಕೃಷ್ಣಾ ಹಾಗೂ ಅದರ ಉಪನದಿಗಳ ಹರಿವು ತುಸು ತಗ್ಗಿದೆ. ಆದರೆ, ಪ್ರವಾಹದ ನೀರು ಕಡಿಮೆಯಾಗಿಲ್ಲ. ಮಂಗಳವಾರ ಕೂಡ ಕೃಷ್ಣಾ ನದಿಗೆ 2.97 ಲಕ್ಷ ಕ್ಯುಸೆಕ್ ನೀರು ಹರಿದಿದೆ.

‘ಕೃಷ್ಣಾ, ಘಟಪ್ರಭಾ, ದೂಧಗಂಗಾ, ವೇದಗಂಗಾ, ಮಾರ್ಕಂಡೇಯ ನದಿಗಳ ನೀರು 42 ಗ್ರಾಮಗಳಿಗೆ ಬಾಧಿಸಿದೆ. ಜಲಾವೃತವಾದ ಗ್ರಾಮಗಳಲ್ಲಿ ಯಾಂತ್ರಿಕ ಬೋಟ್‌ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ನೋಡಲ್‌ ಅಧಿಕಾರಿ
ತಿಳಿಸಿದ್ದಾರೆ.

ಲಕ್ಕವಳ್ಳಿ ಬಳಿ ಭದ್ರಾ ಜಲಾಶಯದಿಂದ ಮಂಗಳವಾರ ನಾಲ್ಕು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಯಿತು

ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ

ಮೈಸೂರು: ಭಾರಿ ಮಳೆಯಾಗುತ್ತಿರುವುದರಿಂದ ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಜನ ಹಾಗೂ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಹಾಗೂ ನದಿ ದಂಡೆಗಳಲ್ಲಿರುವ ಸಾರ್ವಜನಿಕರು ಹಾಗೂ ರೈತರು ಆಸ್ತಿ, ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಬೇಕು. ಮುಂಜಾಗ್ರತೆಯಿಂದ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಕಾವೇರಿ ನೀರಾವರಿ ನಿಗಮ ತಿಳಿಸಿದೆ.

ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗಿ ನೀರು ಭಗಂಡೇಶ್ವರದ ಮೆಟ್ಟಿಲುಗಳನ್ನು ಆವರಿಸಿದೆ. ಕಾಶಿ ಮಠದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಬೇತ್ರಿಯ ಕಾವೇರಿ ನದಿ ಹಿನ್ನೀರಿನಲ್ಲಿ ಸಿಲುಕಿದ್ದ 6 ಮಂದಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ರಕ್ಷಿಸಿದ್ದಾರೆ. ಕುಶಾಲನಗರದ ಸಾಯಿ ಬಡಾವಣೆ ಜಲಾವೃತಗೊಂಡಿದೆ. ದೊಡ್ಡತ್ತೂರು ಗ್ರಾಮದ ಕೆರೆ ಬಿರುಕು ಬಿಟ್ಟಿದ್ದರೆ, ರೊಂಡೆಕೆರೆ ಏರಿ ಮತ್ತೊಮ್ಮೆ ಒಡೆದು, ಜಮೀನುಗಳಿಗೆ ನೀರು ನುಗ್ಗಿದೆ. ಮಡಿಕೇರಿ– ವಿರಾಜಪೇಟೆ ನಡುವಿನ ಭೇತ್ರಿ ಸೇತುವೆಗುಂಟ ನೀರು ಹರಿಯುತ್ತಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಹತ್ತು ಗ್ರಾಮಗಳಲ್ಲಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ.

‘ಶಿರೂರು: ನದಿ ಹೂಳೆತ್ತಲು ಯಂತ್ರದ ನೆರವು ಅಗತ್ಯ’

ಕಾರವಾರ: ‘ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ಸೇರಿರುವ ವ್ಯಾಪಕ ಪ್ರಮಾಣದ ಮಣ್ಣಿನ ರಾಶಿಯ ಹೂಳೆತ್ತಿ, ಅದರಡಿ ಸಿಲುಕಿರಬಹುದಾದ ಲಾರಿ ಮತ್ತು ಕಾಣೆಯಾದ ವ್ಯಕ್ತಿಗಳನ್ನು ಹುಡುಕಲು ಅಗ್ರೋ ಡ್ರೆಡ್ಜ್ ಕ್ರಾಫ್ಟ್ ಯಂತ್ರ ಅಗತ್ಯವಿದೆ ಎಂಬ ವರದಿಯನ್ನು ಕೇರಳ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಕೇರಳದ ತ್ರಿಶ್ಶೂರು ಕೃಷಿ ವಿಶ್ವವಿದ್ಯಾಲಯದ ಸಹಾಯಕ ನಿರ್ದೇಶಕ ವಿಪಿನ್.ಸಿ ತಿಳಿಸಿದರು.

ಅಂಕೋಲಾ ತಾಲ್ಲೂಕಿನ ಶಿರೂರಿಗೆ ಮಂಗಳವಾರ ಭೇಟಿ ನೀಡಿದ ಕೇರಳ ಸರ್ಕಾರದ ಪರ ತಜ್ಞರ ತಂಡದ ನೇತೃತ್ವ ವಹಿಸಿದ್ದ ಅವರು, ಗಂಗಾವಳಿ ನದಿಯ ಹರಿವು ಮತ್ತು ಅಲ್ಲಿನ ಸ್ಥಿತಿಗತಿಯ ಕುರಿತು ಪರಿಶೀಲಿಸಿದರು. ಸಮಿತಿಯ ಸಹ ಸದಸ್ಯರಾದ ಪ್ರದೀಶ, ಯಂತ್ರದ ವಿನ್ಯಾಸಕ ಮತ್ತು ನಿರ್ವಾಹಕ ನಿತಿನ್ ಜತೆಗಿದ್ದರು.

ಭಾಗಮಂಡಲದ ಭಗಂಡೇಶ್ವರ ದೇಗುಲದ ಮೆಟ್ಟಿಲುಗಳು ಮುಳುಗಡೆಯಾಗಿವೆ (ಎಡಚಿತ್ರ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ನೆಮ್ಮಾರ್ ಬಳಿ ಅಡಿಕೆ ತೋಟಕ್ಕೆ ತುಂಗಾ ನದಿ ನೀರು ನುಗ್ಗಿದೆ

5 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’

ಬೆಂಗಳೂರು: ರಾಜ್ಯದ ಕರಾವಳಿ ಸೇರಿ ವಿವಿಧೆಡೆ ಮುಂದಿನ ಒಂದು ವಾರ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಐದು ಜಿಲ್ಲೆಗಳಿಗೆ ಬುಧವಾರ ‘ರೆಡ್ ಅಲರ್ಟ್’ ಘೋಷಿಸಿದೆ. 

ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗೆ ‘ರೆಡ್ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಭಾರಿ ಗಾಳಿಯೊಂದಿಗೆ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಹಾಗೂ ಹಾಸನಕ್ಕೆ ‘ಆರೆಂಜ್ ಅಲರ್ಟ್’, ಬೆಳಗಾವಿ ಮತ್ತು ಮೈಸೂರು ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಭಾರಿ ಮಳೆಯೊಂದಿಗೆ ಗಾಳಿಯ ವೇಗವು 40ರಿಂದ 50 ಕಿ.ಮೀ. ತಲುಪುವ ಸಾಧ್ಯತೆಯಿದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿ ಉದ್ದಕ್ಕೂ ಬಿರುಗಾಳಿ ಯಿಂದ ಕೂಡಿದ ಹವಾಮಾನ ಇರಲಿದೆ. ಗಂಟೆಗೆ 35ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ, ಮೀನುಗಾರರು ಎಚ್ಚರಿಕೆ ವಹಿಸಬೇಕು. ಸಮುದ್ರ ಕಾರ್ಯಾಚರಣೆ ಹಾಗೂ ದಡದಲ್ಲಿ ಮನರಂಜನೆ ಚಟುವಟಿಕೆ ನಡೆಸುವಾಗ ಜಾಗರೂಕ ವಾಗಿರಬೇಕು ಎಂದು ಇಲಾಖೆ
ಹೇಳಿದೆ.

ಗುರುವಾರವೂ ರಾಜ್ಯದ ವಿವಿಧೆಡೆ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಕರಾವಳಿಯ ಮೂರು ಜಿಲ್ಲೆಗಳು ಸೇರಿ ಏಳು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ ಬೆಳಗಾವಿ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. 

ಶಾಲೆಗೆ ಸಿಗದ ರಜೆ ಪೋಷಕರ ಪರದಾಟ

ಸುಬ್ರಹ್ಮಣ್ಯ: ಮಂಗಳವಾರ ಬೆಳಿಗ್ಗೆಯಿಂದ ಕಡಬ, ಸುಬ್ರಹ್ಮಣ್ಯ, ಸುಳ್ಯ ಪರಿಸರದಲ್ಲಿ ಭಾರಿ ಮಳೆಯಾಗಿದ್ದರೂ ಶಾಲಾ–ಕಾಲೇಜುಗಳಿಗೆ ರಜೆ ನೀಡದ ಕಾರಣ ಮನೆಗೆ ತೆರಳುವಾಗ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದರು.

ಸುಬ್ರಹ್ಮಣ್ಯ - ಗುಂಡ್ಯ ಹೆದ್ದಾರಿ ಜಲಾವೃತಗೊಂಡಿದ್ದರಿಂದ ಆ ಭಾಗದ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸಿದರು. ಕೈಕಂಬದಲ್ಲೂ ಸೇತುವೆ ಮುಳುಗಡೆಯಾಗಿತ್ತು. ಇದರಿಂದ ಮಕ್ಕಳನ್ನು ಹೆತ್ತವರು ಎತ್ತಿಕೊಂಡು ಮನೆಗೆ ಕರೆದೊಯ್ಯಬೇಕಾಯಿತು.

ಗುಂಡ್ಯ - ಸುಬ್ರಹ್ಮಣ್ಯ ಹೆದ್ದಾರಿಯ ಚೇರು ಸಮೀಪದ ಶಾಲಾ ವಿದ್ಯಾರ್ಥಿಯನ್ನು ಪೋಷಕರು ಎತ್ತಿಕೊಂಡು ಹೋದ ಚಿತ್ರ ವೈರಲ್ ಆಗಿದೆ. ಅಪಾಯಕಾರಿ ಪರಿಸ್ಥಿತಿ ಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಬೇಕು. ಈ ಮೂಲಕ ಅನಾಹುತ ತಪ್ಪಿಸಬೇಕು ಎಂದು ಕಿಶೋರ್ ಶಿರಾಡಿ ಒತ್ತಾಯಿಸಿದ್ದಾರೆ.

ಮುಂಗಾರಿನಲ್ಲಿ 48 ಜನರ ಸಾವು

ಬಾಗಲಕೋಟೆ: ‘ಮುಂಗಾರು ಹಂಗಾಮಿನಲ್ಲಿ ಮಳೆಯಿಂದಾದ ವಿವಿಧ ಅನಾಹುತಗಳಲ್ಲಿ 48 ಜನರು ಸಾವನ್ನಪ್ಪಿದ್ದಾರೆ. ಆದ್ದರಿಂದ ನೀರಿಗಿಳಿದು ಸಾಹಸ ಮಾಡುವವರ ವಿರುದ್ಧ ಲಾಠಿ ಪ್ರಹಾರ ಮಾಡಿಯಾದರೂ ತಡಿಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಜಿಲ್ಲೆಯ ಮುಧೋಳ ಬಳಿ ಮುಳುಗಡೆಯಾಗಿರುವ ಯಾದವಾಡ ಸೇತುವೆ, ಕಾಳಜಿ ಕೇಂದ್ರ, ಮಳಲಿ ಗ್ರಾಮಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉಕ್ಕಿ ಹರಿಯುವ ನೀರಿಗೆ ಇಳಿದು 12 ಮಂದಿ, ಸಿಡಿಲು ಬಡಿದು ಎಂಟು, ಮರ ಬಿದ್ದು ಆರು, ಮನೆಗಳು ಕುಸಿದು ಬಿದ್ದು 16 ಸೇರಿದಂತೆ ಒಟ್ಟು 48 ಜನರು ಮೃತರಾಗಿದ್ದಾರೆ’ ಎಂದರು.

‘ಶಾಶ್ವತ ಪುನರ್‌ ವಸತಿ ಕಲ್ಪಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆಯ ಕಾರ್ಯ ಹೇಳಿದಷ್ಟು ವೇಗದಲ್ಲಿ ಕೆಲಸ ಆಗುತ್ತಿಲ್ಲ. ಅದು ಸರಳವೂ ಆಗಿಲ್ಲ. ಸರ್ಕಾರಿ ಭೂಮಿಯ ಕೊರತೆಯಿಂದ ವಿಳಂಬವಾಗುತ್ತಿದೆ. ಆದರೂ, ಶಾಶ್ವತ ಪುನರ್ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿದೆ’ ಎಂದು ವಿವರಿಸಿದರು.

‘ರಾಜ್ಯದಲ್ಲಿ 64 ಆರೈಕೆ ಕೇಂದ್ರಗಳು ಚಾಲ್ತಿಯಲ್ಲಿವೆ. 10 ಸಾವಿರ ಜನರು ಆಶ್ರಯ ಪಡೆದಿದ್ದಾರೆ. 44 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. ಇನ್ನೂ ಬೆಳೆ ಹಾನಿಯ ಸರ್ವೆ ಮುಂದುವರಿದಿದೆ. 832 ಮನೆಗಳು ಕುಸಿದುಬಿದ್ದಿವೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.