ADVERTISEMENT

ಜನರು ಸಾಯುತ್ತಿದ್ದರೂ ಸಿ.ಎಂ.ಗೆ ಕಣ್ಣೀರು ಬರುತ್ತಿಲ್ಲ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 20:13 IST
Last Updated 18 ಜೂನ್ 2022, 20:13 IST
   

ಬೆಂಗಳೂರು: ‘ಸಿನಿಮಾ ದೃಶ್ಯದಲ್ಲಿ ನಾಯಿ ಸತ್ತಿದ್ದಕ್ಕೆ ಮುಖ್ಯಮಂತ್ರಿ ಕಣ್ಣೀರಿಟ್ಟಿದ್ದರು. ಮಳೆಯಿಂದ ಜನ ಸಾಯುತ್ತಿದ್ದರೂ ಅವರಿಗೆ ಕಣ್ಣೀರು ಬರುತ್ತಿಲ್ಲ ಏಕೆ ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಬೆಂಗಳೂರಿನಲ್ಲಾದ ಮಳೆ ಹಾನಿ ಕುರಿತು ಟ್ವೀಟ್ ಮಾಡಿರುವ ಅವರು,‘ಮಳೆಯಿಂದ ಆಗುತ್ತಿರುವ ಪ್ರತಿ ಸಾವಿಗೂ ಸರ್ಕಾರವೇ ನೇರ ಹೊಣೆ. ಮೊಸಳೆ ಕಣ್ಣೀರಿನ ಈ ಸೋಗಿನ ಸರ್ಕಾರ ಸಾವಿನ ವ್ಯಾಪಾರ ಮಾಡುತ್ತಿದೆ’ ಎಂದು ದೂರಿದರು.

ಕೆ.ಆರ್. ಪುರ ವಿಧಾನಸಭಾ ಕ್ಷೇತ್ರವು ನಿರಂತರವಾಗಿ ಮಳೆಯ ಅವಾಂತರಕ್ಕೆ ತುತ್ತಾಗುತ್ತಿದ್ದು, ರಾಜಕಾಲುವೆಗಳ ಒತ್ತುವರಿಯ ದೂರು ಕೇಳಿಬರುತ್ತಿದೆ. ಕಳೆದ 9 ವರ್ಷಗಳಿಂದ ಭಾರಿ ಪ್ರಮಾಣದಲ್ಲಿ ಕ್ಷೇತ್ರಕ್ಕೆ ಅನುದಾನ ಮಂಜೂರಾಗಿದ್ದರೂ ಅಭಿವೃದ್ಧಿ ಕೆಲಸಗಳು ಆಗಿಲ್ಲ.ಆ ಹಣವೆಲ್ಲ ಯಾವ ರಾಜಕಾಲುವೆಯ ಮೂಲಕ ಯಾರ ಜೇಬು ಸೇರಿತು? ಕಾಗದದ ಮೇಲಷ್ಟೇ ಕಾಮಗಾರಿಗಳ ಕರಡಿ ಕುಣಿತ ಕಾಣುತ್ತಿದೆ. ಆ ಹಣದ ಲೆಕ್ಕ ಎಲ್ಲಿ? ಒಂದು ತಿಂಗಳ ಹಿಂದೆ ಸುರಿದ ಮಳೆಯಿಂದ ಕೆ.ಅರ್.ಪುರ ವಿಧಾನಸಭೆ ಕ್ಷೇತ್ರ ಈಜುಕೊಳವಾಗಿತ್ತು. ಸಾಯಿ ಲೇಔಟ್ ನೀರಿನಲ್ಲಿ ತೇಲಿ ಬೆಂಗಳೂರಿನ ಹೆಗ್ಗಳಿಕೆಯನ್ನೇ ಅಣಕಿಸಿತ್ತು ಎಂದವರು ಹೇಳಿದ್ದಾರೆ.

ADVERTISEMENT

ರಾಜಕಾಲುವೆಯಲ್ಲಿ ನತದೃಷ್ಟ ಯುವಕನೊಬ್ಬ ಕೊಚ್ಚಿ ಹೋಗಿದ್ದಾನೆ. ಗೋಡೆ ಕುಸಿದು ಮಹಿಳೆಯೊಬ್ಬರು ಅಸುನೀಗಿದ್ದಾರೆ. ಕಳೆದ ತಿಂಗಳು ಸುರಿದ ಮಳೆಯಿಂದ ತತ್ತರಿಸಿದ ಕೆ.ಆರ್.ಪುರದಲ್ಲಿ ಭಾರಿ ಹಾನಿ ಆಗಿದ್ದರೂ ಸ್ಥಳೀಯ ಶಾಸಕರೂ ಆಗಿರುವ ನಗರಾಭಿವೃದ್ಧಿ ಸಚಿವರು ಮತ್ತು ಬಿಬಿಎಂಪಿ ತಿಂಗಳಾದರೂ ಎಚ್ಚೆತ್ತುಕೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.