ADVERTISEMENT

ಭಾರಿ ಮಳೆ – ಕರಾವಳಿ ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್‌’

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 19:30 IST
Last Updated 16 ಜುಲೈ 2021, 19:30 IST
ಹೊನ್ನಾವರ ತಾಲ್ಲೂಕಿನ ಗುಂಡಿಬೈಲಿನಲ್ಲಿ ಗುಂಡಬಾಳ ನದಿ ತುಂಬಿ ಹರಿಯುತ್ತಿದ್ದು, ಸಮೀಪದ ತೋಟಗಳಿಗೆ ನೀರು ನುಗ್ಗಿ ಜಲಾವೃತವಾಗಿವೆ
ಹೊನ್ನಾವರ ತಾಲ್ಲೂಕಿನ ಗುಂಡಿಬೈಲಿನಲ್ಲಿ ಗುಂಡಬಾಳ ನದಿ ತುಂಬಿ ಹರಿಯುತ್ತಿದ್ದು, ಸಮೀಪದ ತೋಟಗಳಿಗೆ ನೀರು ನುಗ್ಗಿ ಜಲಾವೃತವಾಗಿವೆ   

ಬೆಂಗಳೂರು: ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜು.17 ಮತ್ತು 18ರಂದು ಗುಡುಗು, ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಬಿರುಸುಗೊಂಡಿದ್ದು, ಈ ಭಾಗಗಳ ಜಿಲ್ಲೆಗಳಲ್ಲಿ ಜು.20ರವರೆಗೆ ಮಳೆಯಾಗುವ ಮುನ್ಸೂಚನೆ ಇದೆ. ಕರಾವಳಿಯಲ್ಲಿ ಗಂಟೆಗೆ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಸೂಚಿಸಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ‘ಆರೆಂಜ್ ಅಲರ್ಟ್‌’, ತುಮಕೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ.

ADVERTISEMENT

ಮಳೆ–ಎಲ್ಲಿ,ಎಷ್ಟು?: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಭಾಗದಲ್ಲಿ ಶುಕ್ರವಾರ 20 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಮಂಗಳೂರು 13, ಪುತ್ತೂರು 12, ಬೆಳ್ತಂಗಡಿ, ಸುಳ್ಯ, ಹೊಸನಗರ 10, ಉಡುಪಿ, ಮಡಿಕೇೆರಿ 9, ಕಾರವಾರ 8, ಕುಂದಾಪುರ, ಸಕಲೇಶಪುರ 6, ಚಿಂಚೋಳಿ, ಶಿಕಾರಿಪುರ, ವಿರಾಜಪೇಟೆ 5, ಕಮಲಾಪುರ 3, ಸಾಗರ, ಹಾಸನ 2, ಬೆಳಗಾವಿ, ಕಲಬುರ್ಗಿ, ಸೊರಬ, ಹುಣಸೂರು, ಅರಕಲಗೂಡು, ಚಿಕ್ಕಮಗಳೂರು ಹಾಗೂ ತರೀಕೆರೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ವಿಜಯಪುರದಲ್ಲಿ 29 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ಹಾಗೂ ಹಾಸನದಲ್ಲಿ 16 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.