ADVERTISEMENT

Karnataka Rains | ಭಾರಿ ಮಳೆ: ಮಕ್ಕಳು ಸೇರಿ 5 ಸಾವು

ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ನಾಪತ್ತೆ; ಕಿಂಡಿ ಅಣೆಕಟ್ಟೆಗೆ ಬಿದ್ದ ವ್ಯಕ್ತಿ ಗಾಗಿ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 31 ಮೇ 2025, 0:33 IST
Last Updated 31 ಮೇ 2025, 0:33 IST
<div class="paragraphs"><p>ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲ್ಲೂಕಿನ ಮೊಂಟೆಪದವು ಪಂಬದಹಿತ್ತಿಲುಕೋಡಿಕೊಪ್ಪಲಿನಲ್ಲಿ ಮನೆಯ ಮೇಲೆ ಗುಡ್ಡು ಕುಸಿದು ಮಣ್ಣಿನಡಿ ಸಿಲುಕಿದ್ದ ಅಶ್ವಿನಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು </p></div>

ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲ್ಲೂಕಿನ ಮೊಂಟೆಪದವು ಪಂಬದಹಿತ್ತಿಲುಕೋಡಿಕೊಪ್ಪಲಿನಲ್ಲಿ ಮನೆಯ ಮೇಲೆ ಗುಡ್ಡು ಕುಸಿದು ಮಣ್ಣಿನಡಿ ಸಿಲುಕಿದ್ದ ಅಶ್ವಿನಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು

   

 ಚಿತ್ರ: ಫಕ್ರುದ್ದೀನ್ ಎಚ್‌.

ಮಂಗಳೂರು/ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಗುರುವಾರ ರಾತ್ರಿಯಿಂದ ತೀವ್ರಗೊಂಡಿದ್ದು ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು ಐವರು ಮೃತಪಟ್ಟಿದ್ದಾರೆ.

ADVERTISEMENT

ಉಳ್ಳಾಲ ತಾಲ್ಲೂಕು ಮಂಜನಾಡಿ ಗ್ರಾಮದ ಮೊಂಟೆಪದವು ಪಂಬದಹಿತ್ತಿಲುಕೋಡಿ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ಬಿದ್ದು ಪ್ರೇಮಾ ಕಾಂತಪ್ಪ ಪೂಜಾರಿ (65), ಅವರ ಪುತ್ರ ಸೀತಾರಾಂ ಅವರ ಮಕ್ಕಳಾದ ಆರ್ಯನ್‌ (3) ಹಾಗೂ ಆರುಷ್‌ (2) ಸಾವಿಗೀಡಾಗಿದ್ದು ಬೆಳ್ಮ ಗ್ರಾಮದ ಕಾಣೆಕೆರೆಯಲ್ಲಿ ಗುಡ್ಡ ಕುಸಿದು ನೌಷಾದ್ ಅವರ ಪುತ್ರಿ ಫಾತಿಮಾ ನಯೀಮ (11) ಪ್ರಾಣ ಕಳೆದುಕೊಂಡಿದ್ದಾರೆ. 

ಬಂಟ್ವಾಳ ತಾಲ್ಲೂಕಿನಲ್ಲಿ ನಿಯಂತ್ರಣ ಕಳೆದುಕೊಂಡ ಲಾರಿ ವಿದ್ಯುತ್ ಪರಿವರ್ತಕಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿ ಜಾರ್ಖಂಡ್‌ನ ಕಾರ್ಮಿಕರೊಬ್ಬರು ಸಾವಿಗೀಡಾಗಿದ್ದಾರೆ. ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ನಾಪತ್ತೆಯಾಗಿದ್ದಾರೆ.

ಮೂಡುಬಿದಿರೆ ತಾಲ್ಲೂಕಿನ ವಾಲ್ಪಾಡಿ ಗ್ರಾಮದ ಕಟ್ಟಡದಡಿಯ ಕಿಂಡಿ ಅಣೆಕಟ್ಟೆಯ ಹಲಗೆ ತೆಗೆಯಲು ಹೋಗಿದ್ದ  ಗ್ರಾಮದ ಗುರುಪ್ರಸಾದ್ ಭಟ್ (38) ಎಂಬವರು ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ.

ಪಂಬದಹಿತ್ತಿಲುಕೋಡಿಯಲ್ಲಿ ತಡರಾತ್ರಿ 3.30ರ ವೇಳೆ ಸುಮಾರು 30 ಅಡಿ ಎತ್ತರದ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದಿದೆ.

ಇದರಿಂದ ಮನೆಗೆ ಸಂಪೂರ್ಣ ಹಾನಿಯಾಗಿದೆ. ಸಮೀಪದಲ್ಲಿದ್ದ ಮೂರು ಬೃಹತ್ ಮರಗಳೂ ಬುಡಸಮೇತ ಕಿತ್ತುಬಿದ್ದಿವೆ. ಭಾರಿ ಸದ್ದು ಕೇಳಿದ ಕಾಂತಪ್ಪ ಅವರ ಪುತ್ರ ಸೀತಾರಾಂ ಓಡಿ ಹೊರಗೆ ಬಂದಿದ್ದಾರೆ. ಕಾಂತಪ್ಪ ಅವರು ಹೊರಗೆ ಬರುವಷ್ಟರಲ್ಲಿ ಕಲ್ಲು– ಮಣ್ಣು ಅವರ ಮೇಲೆ ಬಿದ್ದಿವೆ. ಇದರಿಂದಾಗಿ ಅವರ ಎಡಗಾಲು ತುಂಡಾಗಿದೆ. ಪ್ರೇಮಾ ಮತ್ತು ಆರ್ಯನ್‌ ಸ್ಥಳದಲ್ಲೇ ಅಸುನೀಗಿದ್ದಾರೆ.

ಸೀತಾರಾಂ ಅವರ ಪತ್ನಿ ಅಶ್ವಿನಿ ಮತ್ತು ಮಗು ಆರುಷ್‌ ಮೇಲೆ ಚಾವಣಿಯ ಒಂದು ಭಾಗ ಬಿದ್ದಿತ್ತು. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಶುಕ್ರವಾರ ಮಧ್ಯಾಹ್ನದವರೆಗೆ ಕಾರ್ಯಾಚರಣೆ ನಡೆಸಿ, ಅವರನ್ನು ಹೊರತೆಗೆದರು. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆರುಷ್ ಅಸುನೀಗಿದ್ದಾನೆ. ಗಾಯಗೊಂಡಿರುವ ಅಶ್ವಿನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಣೆಕೆರೆಯಲ್ಲಿ ಕುಸಿದ ಗುಡ್ಡದ ಮಣ್ಣು ನೌಷಾದ್ ಅವರ ಮನೆಯ ಬೆಡ್‌ ರೂಂ ಭಾಗಕ್ಕೆ ಬಿದ್ದಿದೆ. ಬಾಲಕಿ ಫಾತಿಮಾ ನಯೀಮ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.

ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲ್ಲೂಕಿನ ಮೊಂಟೆಪದವು ಪಂಬದಹಿತ್ತಿಲುಕೋಡಿಕೊಪ್ಪಲಿನಲ್ಲಿ ಮನೆಯ ಮೇಲೆ ಗುಡ್ಡು ಕುಸಿದು ಮಣ್ಣಿನಡಿ ಸಿಲುಕಿದ್ದ ಅಶ್ವಿನಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್‌.

ಕೋಟೆಕಾರ್‌ನಲ್ಲಿ 31.2 ಸೆಂ.ಮೀ ಮಳೆ

ಜಿಲ್ಲೆಯಾದ್ಯಂತ ಗುರುವಾರ ರಾತ್ರಿಯಿಂದ ಒಂದೇ ಸಮನೆ ಮಳೆಯಾಗಿದ್ದು ಉಳ್ಳಾಲ ತಾಲ್ಲೂಕಿನ ಕೋಟೆಕಾರ್‌ನಲ್ಲಿ ಮೇ 30ರಂದು ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಅತ್ಯಧಿಕ 31.2 ಸೆಂ.ಮೀ ಮಳೆ ದಾಖಲಾಗಿದೆ. ಜಿಲ್ಲೆಯ 20 ಕೇಂದ್ರಗಳಲ್ಲಿ 10 ಸೆಂ.ಮೀಟರ್‌ಗಿಂತ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೋಟೆಕಾರ್ ಸೇರಿದಂತೆ ಉಳ್ಳಾಲ ತಾಲ್ಲೂಕಿನ ನಾಲ್ಕು ಕೇಂದ್ರಗಳಲ್ಲಿ 20ಸೆಂ.ಮೀಗೂ ಅಧಿಕ ಮಳೆಯಾಗಿದೆ. ತಲಪಾಡಿಯಲ್ಲಿ 28.8, ಕಿನ್ಯದಲ್ಲಿ 28.2, ಮುನ್ನೂರಿನಲ್ಲಿ 26.3 ಸೆಂ.ಮೀ. ಮಳೆಯಾಗಿದೆ.

ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ಗುರುವಾರ ಮಧ್ಯರಾತ್ರಿ ಹೋಗಿದ್ದ ಬೆಂಗ್ರೆ ನಿವಾಸಿಗಳಾದ ಕಮಲಾಕ್ಷ ಮತ್ತು ಯಶವಂತ ನಾಪತ್ತೆಯಾಗಿದ್ದು ಶುಕ್ರವಾರ ಸಂಜೆಯ ವರೆಗೂ ಹುಡುಕಾಟ ನಡೆಸಲಾಯಿತು. 

ಧಾರಾಕಾರ ಮಳೆಯಿಂದ ಮಂಗಳೂರು ನಗರದ ಮಿಷನ್ ಸ್ಟ್ರೀಟ್ ರಸ್ತೆಯ ಕಾರ್ಮಿಕರು ವಾಸ ಮಾಡುವ ವಸತಿ ಸಮುಚ್ಚಯ, ಮಾಲೆಮಾರ್ ಮುಂತಾದ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು.

ಬಿಜೈ–ಕಾಪಿಕಾಡ್ ರಸ್ತೆಯಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದು ವಾಹನಸಂಚಾರಕ್ಕೆ ಅಡ್ಡಿಯಾಯಿತು. ಜೆಪ್ಪು ಬಳಿ ಮಂಗಳೂರು ಸೆಂಟ್ರಲ್‌ನಿಂದ ಕೇರಳಕ್ಕೆ ಸಾಗುವ ರೈಲು ಹಳಿ‌ ಮೇಲೆ‌‌ ಮರ ಬಿದ್ದು ಸ್ವಲ್ಪ ಸಮಯ ರೈಲು ಸಂಚಾರಕ್ಕೆ ಅಡ್ಡಿಯಾಯಿತು. ತಣ್ಣೀರುಬಾವಿ ಬೀಚ್‌ನಲ್ಲಿ ಶುಕ್ರವಾರ ಆರಂಭವಾಗಬೇಕಾಗಿದ್ದ ಇಂಡಿಯನ್ ಓಪನ್ ಸರ್ಫಿಂಗ್‌ನ ಮೊದಲ ದಿನದ ಸ್ಪರ್ಧೆಗಳನ್ನು ಶನಿವಾರಕ್ಕೆ ಮುಂದೂಡಲಾಯಿತು.

ನೆರೆಯ ಕಾಸರಗೋಡಿನ ಪ್ರಸಿದ್ಧ ಮಧೂರು ಮದನಂತೇಶ್ವರ ವಿನಾಯಕ ದೇವಾಲಯ ಜಲಾವೃತವಾಗಿದೆ. ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲೂ ಬಿರುಸಿನ ಮಳೆ ಸುರಿಯಿತು. 

ತ್ವರಿತ ಪರಿಹಾರ ಕ್ರಮಕ್ಕೆ ಸಿಎಂ ಸೂಚನೆ
ಬೆಂಗಳೂರು:‘ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದ್ದು, ಪರಿಸ್ಥಿತಿ ನಿರ್ವಹಣೆ ಮಾಡಲು ಸಿದ್ದರಾಗಿ. ಮಳೆಹಾನಿ ಪ್ರದೇಶಗಳಿಗೆ ತಕ್ಷಣವೇ ಭೇಟಿ ನೀಡಿ ಪರಿಹಾರ ಒದಗಿಸಿ. ಭೂಕುಸಿತದ ಅಪಾಯ ಇರುವ ಪ್ರದೇಶದಿಂದ ಜನರನ್ನು ತೆರವು ಮಾಡಿ. ರಾಜ್ಯ ವಿಪತ್ತು ನಿರ್ವಹಣಾ ನಿಧಿಯಲ್ಲಿ ₹1,000 ಕೋಟಿಗೂ ಅಧಿಕ ಮೊತ್ತವಿದ್ದು, ಪರಿಹಾರ ನೀಡಲು ಹಿಂದೇಟು ಹಾಕಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಿಇಒಗಳಿಗೆ ಸೂಚಿಸಿದ್ದಾರೆ.

ಮನೆಹಾನಿಗೆ ಪರಿಹಾರ

ಈ ಮುಂಗಾರಿನ ಅವಧಿಯಲ್ಲಿ ಅತಿವೃಷ್ಟಿಯಿಂದ ಮನೆಗಳಿಗೆ ಹಾನಿಯಾದರೆ, ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್‌) ಮತ್ತು ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್‌) ಅಡಿ ನಿಗದಿ ಮಾಡಿರುವ ಪರಿಹಾರದ ಮೊತ್ತದ ಜತೆಗೆ ರಾಜ್ಯಸರ್ಕಾರದಿಂದಲೂ ಹೆಚ್ಚುವರಿ ಪರಿಹಾರ ನೀಡಲು ಕ್ರಮತೆಗೆದುಕೊಂಡಿದೆ. ಈ ಸಂಬಂಧ ಕಂದಾಯ ಇಲಾಖೆಯು ಶುಕ್ರವಾರ ಆದೇಶ ಹೊರಡಿಸಿದೆ.

‘ಮನೆಹಾನಿ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗಳು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ತಮ್ಮ ಪಿ.ಡಿ ಖಾತೆಯಲ್ಲಿ ಇರುವ ಹಣದಲ್ಲಿ ತಕ್ಷಣವೇ ಪರಿಹಾರ ಒದಗಿಸಬೇಕು’ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.