ಬೆಳಗಾವಿ: ಕರ್ನಾಟಕದ ಹೆಬ್ಬಾಗಿಲು ಬೆಳಗಾವಿಯಲ್ಲಿ ಶುಕ್ರವಾರ ರಾಜ್ಯೋತ್ಸವದ ವೈಭವ ಮೈ ನವಿರೇಳಿಸಿತು. ನಗರದ ಮೂಲೆ ಮೂಲೆಯಿಂದ, ಹಳ್ಳಿ– ಪಟ್ಟಣಗಳಿಂದ ಅಪಾರ ಸಂಖ್ಯೆಯಲ್ಲಿ ಸೇರಿದ ಜನ ಹಾಡಿ, ಕುಣಿದು, ಕನ್ನಡಮ್ಮನ ತೇರು ಎಳೆದರು. ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಂತೂ ಕನ್ನಡಿಗರ ಸಗಡರ ಜಲಪಾತದಂತೆ ಭೋರ್ಗರೆಯಿತು.
ಗುರುವಾರ ತಡರಾತ್ರಿ 12ಕ್ಕೆ ರಾಜ್ಯೋತ್ಸವಕ್ಕೆ ಚಾಲನೆ ನೀಡಲಾಯಿತು. ರಾತ್ರಿ ಕೂಡ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಯುವಜನರು ನಸುಕಿನವರೆಗೂ ಕುಣಿದು– ಕುಪ್ಪಳಿಸಿದರು. ಶುಕ್ರವಾರ ಸೂರ್ಯೋದಯ ಆಗುವಷ್ಟರಲ್ಲಿ ಜನಸಾಗರವೇ ಹರಿದುಬಂತು.
ಎತ್ತ ನೋಡಿದರೂ ಜನವೋ ಜನ, ಕಿವಿಗಡಚಿಕ್ಕುವ ಸಂಗೀತದ ಅಬ್ಬರ, ಹಳದಿ– ಕೆಂಪು ಬಾವುಟಗಳ ಹಾರಾಟ, ಶಲ್ಯಗಳ ತೂರಾಟ, ಡಿಜೆ ಸಂಗೀತಕ್ಕೆ ನಿರಂತರ ನರ್ತನ ನಿರಂತರವಾಗಿ ಮುಂದುವರಿಯಿತು. ಪುಟಾಣಿ ಮಕ್ಕಳಿಂದ ಹಿಡಿದು, ಯುವತಿಯರು, ಯುವಕರು, ಮಹಿಳೆಯರು, ಹಿರಿಯರು ಕೂಡ ನಾಡಗೀತೆ, ರಂಗಗೀತೆ, ಜನಪದ ಹಾಡು, ಸಿನಿಗೀತೆಗಳಿಗೆ ಹೆಜ್ಜೆ ಹಾಕಿದರು.
ಸಂಘಟನೆಗಳ ಯುವಕರು ಲಾರಿ, ಟ್ರ್ಯಾಕ್ಟರ್, ಟೆಂಪೊಗಳನ್ನು ಅಲಂಕಾರ ಮಾಡಿ, ಡಾಲ್ಬಿಗಳನ್ನು ಕಟ್ಟಿಕೊಂಡು, ವಿದ್ಯುದ್ದೀಪಾಲಂಕಾರ ಮಾಡಿ ಸಂಭ್ರಮಿಸಿದರು. ಸೈಕಲ್, ಬೈಕು, ಆಟೊಗಳ ಮಾಲೀಕರು ಕೂಡ ತಮ್ಮ ತಮ್ಮ ವಾಹನಗಳಿಗೆ ಕನ್ನಡದ ಅಲಂಕಾರ ಮಾಡಿದರು.
ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿ ಗಾಳಿಯಲ್ಲಿ ತೇಲಿಬಂದಾಗ ಕನ್ನಡಿಗರ ಹರ್ಷದ ಕಟ್ಟೆ ಒಡೆಯಿತು. ಪ್ರತಿಯೊಬ್ಬರೂ ಕುಣಿದು ಸಂಭ್ರಮಿಸಿದರು.
ಇದಕ್ಕೂ ಮುನ್ನ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ಎತ್ತಿನಬಂಡಿಯಲ್ಲಿ ಭುವನೇಶ್ವರಿಯ ಪ್ರತಿಮೆ ಮೆರವಣಿಗೆ ಮಾಡಲಾಯಿತು. ಪಂಪ, ರನ್ನ, ಪೊನ್ನ, ಚಂಪ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಹಲವು ರೂಪಕಗಳು ಕಣ್ಮನ ಸೆಳೆದವು.
ನಗರದ ಎಲ್ಲ ದ್ವಿಮುಖ ರಸ್ತೆಗಳಲ್ಲೂ ಕಿಕ್ಕಿರಿದು ಸೇರಿದ್ದ ಜನ ಫೋಟೊ, ಸೆಲ್ಫಿ ಸೆರೆಹಿಡಿದುಕೊಂಡರು. ಮಾರ್ಗದಲ್ಲಿ ಹಲವು ಜನ ಕುಡಿಯುವ ನೀರು, ಮಜ್ಜಿಗೆ, ಪಲಾವ್, ವಡಾಪಾವ್, ಭಡಂಗ್ ಮುಂತಾದ ತಿಂಡಿಗಳನ್ನು ಕರೆದುಕೊಟ್ಟರು.
ಹಾಡಿನಲ್ಲೇ ನಾಡದ್ರೋಹಿಗಳಿಗೆ ಎಚ್ಚರಿಕೆ
‘ಯಾರಪ್ಪಂದ್ ಏನೈತಿ– ಬೆಳಗಾವಿ ನಮ್ಮದೈತಿ’, ‘ರಾಣಿ ಚನ್ನಮ್ಮ ಕೊಡಲಿಲ್ಲ ಕಪ್ಪ– ಬೆಳಗಾವಿ ಕೇಳಿ ಮಾಡಬ್ಯಾಡಲೇ ತಪ್ಪ’, ‘ಬೆಳಗಾವಿ ಹುಡುಗ, ಬೆಳಗಾವಿ ಹುಡುಗಿ ಬಿಟ್ಟಿ ಸಿಕ್ಕಲ್ಲ...’, ‘ಧಮ್ ಇದ್ರೆ ಬಾ, ದಿಲ್ ಇದ್ರೆ ಬಾ...’ ಎಂಬ ಹಾಡುಗಳಿಗೆ ಪಡ್ಡೆ ಹುಡುಗ– ಹುಡುಗಿಯರು ಇನ್ನಿಲ್ಲದಂತೆ ಕುಣಿದರು.
‘ಕನ್ನಡದ ಅನ್ನ ತಿಂದು, ನಾಡದ್ರೋಹ ಎಸಗುವ ಪುಂಡರನ್ನು ಪುಡಿಗಟ್ಟುತೇವ, ತಾಯಿಗಾಗಿ ಕಂಕಣ ಕಟ್ಟುತೇವ...’ ಹಾಡಿಗೆ ಹೆಜ್ಜೆ ಹಾಕದವರೇ ಇಲ್ಲ. ಇಂಥ ಕ್ರಾಂತಿಕಾಯಿ ಹಾಡುಗಳ ಮೂಲಕ ನಾಡದ್ರೋಹಿ ಎಂಇಎಸ್‌ಗೆ ಎಚ್ಚರಿಕೆಯನ್ನೂ ನೀಡಿದರು.
ಮೆರವಣಿಗೆ ಮಧ್ಯೆಮಧ್ಯೆ ಸಂಗೀತ ನಿಲ್ಲಿಸಿ ಜೈಕಾರ ಮೊಳಗಿಸಿದರು. ಕನ್ನಡಾಂಬೆಗೆ ಜಯವಾಗಲಿ, ಇಮ್ಮಡಿ ಪುಲಿಕೇಶಿಗೆ ಜಯವಾಗಲು, ಕರುನಾಡ ರಮಾರಮಣ ಶ್ರೀಕೃಷ್ಣದೇವರಾಯರಿಗೆ ಜೈ, ರಾಣಿ ಚನ್ನಮ್ಮನಿಗೆ, ಸಂಗೊಳ್ಳಿ ರಾಯಣ್ಣನಿಗೆ ಜಯವಾಗಲಿ ಎಂಬ ಜೈಕಾರಗಳು ಮುಗಿಲು ಮುಟ್ಟಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.