ADVERTISEMENT

ಪಹಲ್ಗಾಮ್‌ನಲ್ಲಿ ಕನ್ನಡದ ಕಲರವ

ಏಳು ತಿಂಗಳ ಹಿಂದೆ ಉಗ್ರರ ದಾಳಿಗೆ ಮಡಿದ ಜೀವಗಳಿಗೆ ಕನ್ನಡ ಮನಗಳ ನಮನ

ಆರ್. ಮಂಜುನಾಥ್
Published 22 ನವೆಂಬರ್ 2025, 23:38 IST
Last Updated 22 ನವೆಂಬರ್ 2025, 23:38 IST
<div class="paragraphs"><p>ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ&nbsp;ಶನಿವಾರ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.</p></div>

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಶನಿವಾರ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.

   

ಪಹಲ್ಗಾಮ್‌: ಪರ್ವತ ಶ್ರೇಣಿಗಳ ಕಣಿವೆ, ಗಿಡ ಮರಗಳ ಹಸಿರಿನ ಸಿಂಗಾರ, ಗಿರಿ ಶಿಖರಗಳ ಮೇಲಿನ ಹಿಮದ ಮೇಲೆ ಚಿನ್ನದ ಪ್ರಕಾಶಮಾನ, ಲಿದ್ದರ್ ನದಿಯ ಜುಳು ಜುಳು ಹರಿವಿನ ನಡುವೆ ಕನ್ನಡದ ಕಲರವ, ಹಳದಿ- ಕೆಂಪು ಬಣ್ಣದ ಆಕರ್ಷಣೆ…

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಂತಹ ಆಹ್ಲಾದಕರ ವಾತಾವರಣದಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಶನಿವಾರ ಅನಾವರಣಗೊಂಡಿತು.

ADVERTISEMENT

ಗ್ರೇಟರ್ ಬೆಂಗಳೂರು ಪ್ರಾಧಿಕಾರ- ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ಪಹಲ್ಗಾಮ್‌ನ ಪ್ರವಾಸೋದ್ಯಮ ನಿಗಮದ ಸಹಕಾರದೊಂದಿಗೆ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಆಯೋಜಿಸಿತ್ತು.

ಈ ವರ್ಷದ ಏಪ್ರಿಲ್ 22ರಂದು ಪಹಲ್ಗಾಮ್ ಕಣಿವೆಯಲ್ಲಿ 26 ಪ್ರವಾಸಿಗರನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದರು. ಜಿಬಿಎ ಅಧಿಕಾರಿಗಳು - ನೌಕರರು ಮಡಿದ ಜೀವಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಪಹಲ್ಗಾಮ್ ಇನ್ನೂ ಹಿಂದಿನ ಸ್ಥಿತಿಗೆ ಮರಳಿಲ್ಲ. ಉಗ್ರರ ದಾಳಿ ಘಟನೆಯಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಪಹಲ್ಗಾಮ್ ಎಂದರೆ ಎಲ್ಲರಲ್ಲೂ ಆತಂಕ ಇದ್ದೇ ಇದೆ. ಸುಮಾರು 2,900 ಕಿಲೋಮೀಟರ್ ದೂರದಿಂದ ಕನ್ನಡಿಗರು ಬಂದು ರಾಜ್ಯೋತ್ಸವ ಆಚರಣೆ ಮತ್ತು ಶ್ರದ್ಧಾಂಜಲಿ ಸಲ್ಲಿಸಿದ್ದನ್ನು ಸ್ಥಳೀಯ ಪೊಲೀಸ್ ಇಲಾಖೆಯ ವರಿಷ್ಠರು ಪ್ರಶಂಸಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಆರ್.ಸಂಪತ್ ರಾಜ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಮಾಜಿ ಮೇಯರ್ ಎಂ. ಗೌತಮ್ ಕುಮಾರ್, ಬೆಂಗಳೂರು ದೂರದರ್ಶನ  ಕೇಂದ್ರದ ಮುಖ್ಯಸ್ಥೆ ಆರತಿ ಎಚ್.ಎನ್, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗ, ವಕೀಲ ವಿ.ಶ್ರೀನಿವಾಸ್ ಭಾಗವಹಿಸಿದ್ದರು.

ಯಕ್ಷಗಾನ ಮತ್ತು ಡೊಳ್ಳುಕುಣಿತ ಪ್ರದರ್ಶಿಸಲಾಯಿತು.

ಸ್ಥಳೀಯರ ನೆರವಿನಿಂದ ಯಶಸ್ಸು: ಅಮೃತ್ ರಾಜ್

‘ಕರ್ನಾಟಕದಿಂದ ಪಹಲ್ಗಾಮ್‌ಗೆ ಬಂದು ರಾಜ್ಯೋತ್ಸವ ಆಚರಿಸುವುದು ಸುಲಭವಾಗಿರಲಿಲ್ಲ. ಉಗ್ರರ ದಾಳಿಯಲ್ಲಿ ಸತ್ತವರಿಗೆ ಶ್ರದ್ಧಾಂಜಲಿ ಸಲ್ಲಿಸಲು  ಅನುಮತಿ ಬೇಕಿತ್ತು. ರಾಷ್ಟ್ರಪತಿ ಪ್ರಧಾನಿ ಗೃಹ ಸಚಿವ ರಕ್ಷಣಾ ಸಚಿವ ಸೇರಿದಂತೆ ಜಮ್ಮು- ಕಾಶ್ಮೀರದ ಅಧಿಕಾರಿಗಳಿಗೂ ಪತ್ರ ಬರೆದು ಅನುಮತಿ ಕೋರಲಾಯಿತು. ಸ್ಥಳೀಯ ಪೊಲೀಸರು ಯೋಧರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಾಧ್ಯವಾಯಿತು‘ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ- ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ತಿಳಿಸಿದರು.

‘ಉಗ್ರರ ದಾಳಿಯಲ್ಲಿ ಕನ್ನಡಿಗರೂ ಮೃತಪಟ್ಟಿದ್ದರು. ಅವರನ್ನು ಕೊಂದ ಸ್ಥಳದಲ್ಲೇ ಶ್ರದ್ಧಾಂಜಲಿ ಸಲ್ಲಿಸಬೇಕು ಎಂಬ ಕಿಚ್ಚಿತ್ತು. ಉಗ್ರರು ಕೊಂದಿದ್ದ ವ್ಯಕ್ತಿಗಳ ದೇಹಗಳನ್ನು ಪಹಲ್ಗಾಮ್ ಕ್ಲಬ್‌ನಲ್ಲಿ ಇಡಲಾಗಿತ್ತು. ಅದೇ ಕ್ಲಬ್‌ನಲ್ಲಿ ಏಳು ತಿಂಗಳ ನಂತರ ಕಾರ್ಯಕ್ರಮ ಮಾಡಿ ಬಾವುಟ ಹಾರಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.