ADVERTISEMENT

Covid-19 Karnataka Updates: 1,798 ಹೊಸ ಪ್ರಕರಣ, 7 ಮಂದಿ ಸಾವು

ಸತತ ಐದನೇ ದಿನ ಪ್ರಕರಣಗಳ ಸಂಖ್ಯೆ ಏರಿಕೆ

ಏಜೆನ್ಸೀಸ್
Published 20 ಮಾರ್ಚ್ 2021, 20:09 IST
Last Updated 20 ಮಾರ್ಚ್ 2021, 20:09 IST
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದುಕೊಂಡಿದ್ದು, ಶನಿವಾರ 1,798 ಪ್ರಕರಣಗಳು ದೃಢಪಟ್ಟಿವೆ.

ಕಳೆದ ನ.24ರಂದು ರಾಜ್ಯದಲ್ಲಿ 1,870 ಪ್ರಕರಣಗಳು ವರದಿಯಾಗಿದ್ದವು. ಈಗ ಮತ್ತೆ ಹೊಸ ಪ್ರಕರಣಗಳ ಸಂಖ್ಯೆ ಎರಡು ಸಾವಿರದ ಗಡಿಯ ಆಸುಪಾಸಿಗೆ ತಲುಪಿದೆ. ರಾಜ್ಯದಲ್ಲಿ ಸತತ ಐದನೇ ದಿನ ಕೂಡ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದ್ದು, ಈ ಅವಧಿಯಲ್ಲಿ 7,285 ಮಂದಿ ಸೋಂಕಿತರಾಗಿರುವುದು ಖಚಿತಪಟ್ಟಿದೆ.

ಈ ತಿಂಗಳು 20 ದಿನಗಳಲ್ಲಿ 17,362 ಮಂದಿ ಕೊರೊನಾ ಸೋಂಕಿತರಾಗಿದ್ದಾರೆ. ಹೊಸ ಪ್ರಕರಣಗಳು ಏರುಗತಿ ಪಡೆದ ಕಾರಣ ಸಕ್ರಿಯ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗಿದ್ದು, 12,828 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 134 ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ.

ADVERTISEMENT

ಸೋಂಕಿತರಲ್ಲಿ ಬೆಂಗಳೂರಿನಲ್ಲಿ 5 ಮಂದಿ, ಬೀದರ್ ಹಾಗೂ ವಿಜಯಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,432ಕ್ಕೆ ತಲುಪಿದೆ. ಕೋವಿಡ್ ಪೀಡಿತರಲ್ಲಿ ಮತ್ತೆ 1,030 ಮಂದಿ ಚೇತರಿಸಿಕೊಂಡಿದ್ದಾರೆ. ಗುಣಮುಖರಾದವರ ಒಟ್ಟು ಸಂಖ್ಯೆ 9.43 ಲಕ್ಷ ದಾಟಿದೆ. ಒಂದು ದಿನದ ಅವಧಿಯಲ್ಲಿ 94,043 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಈವರೆಗೆ ನಡೆಸಲಾದ ಪರೀಕ್ಷೆಗಳ ಸಂಖ್ಯೆ 2.02 ಕೋಟಿ ಗಡಿ ದಾಟಿದೆ. ‌

ಬೆಂಗಳೂರಿನಲ್ಲಿ ಏರಿಕೆ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೊಸದಾಗಿ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರುಗತಿ ಪಡೆದುಕೊಂಡಿದೆ. ಹೊಸದಾಗಿ 1,186 ಪ್ರಕರಣಗಳು ವರದಿಯಾಗಿದ್ದು, ನಾಲ್ಕು ತಿಂಗಳ ಬಳಿಕ 24 ಗಂಟೆಗಳ ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿವೆ. 48 ಗಂಟೆಗಳ ಅವಧಿಯಲ್ಲಿ 2,223 ಮಂದಿ ಸೋಂಕಿತರಾಗಿದ್ದಾರೆ. ಈವರೆಗೆ ಸೋಂಕಿತರಾದವರ ಸಂಖ್ಯೆ 4.16 ಲಕ್ಷ ದಾಟಿದೆ.

ಮೈಸೂರಿನಲ್ಲಿ ಮತ್ತೆ 59 ಪ್ರಕರಣಗಳು ದೃಢಪಟ್ಟಿವೆ. ಅಲ್ಲಿ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 54,741ಕ್ಕೆ ತಲುಪಿದೆ. ಉಡುಪಿಯಲ್ಲಿ 66, ಕಲಬುರ್ಗಿಯಲ್ಲಿ 61, ದಕ್ಷಿಣ ಕನ್ನಡದಲ್ಲಿ 52, ಬೀದರ್‌ನಲ್ಲಿ 49, ತುಮಕೂರಿನಲ್ಲಿ 43 ಪ್ರಕರಣಗಳು ಹೊಸದಾಗಿ ವರದಿ‌ಯಾಗಿವೆ.

10 ಲಕ್ಷ ಹಿರಿಯ ನಾಗರಿಕರಿಗೆ ಲಸಿಕೆ

ರಾಜ್ಯದಲ್ಲಿ ಶನಿವಾರ 3,404 ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ವಿತರಣೆ ಅಭಿಯಾನ ನಡೆದಿದ್ದು, 72,024 ಲಕ್ಷ ಮಂದಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಲಸಿಕೆ ಪಡೆದವರಲ್ಲಿ 50,880 ಮಂದಿ ಹಿರಿಯ ನಾಗರಿಕರಾಗಿದ್ದಾರೆ. ಈವರೆಗೆ 23.34 ಲಕ್ಷ ಡೋಸ್ ಲಸಿಕೆಯನ್ನು ಫಲಾನುಭವಿಗಳಿಗೆ ನೀಡಲಾಗಿದೆ. 5.15 ಲಕ್ಷ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇವರಲ್ಲಿ 3.13 ಲಕ್ಷ ಮಂದಿ ಎರಡನೇ ಡೋಸ್ ಪೂರ್ಣಗೊಳಿಸಿದ್ದಾರೆ. ಲಸಿಕೆ ಪಡೆದುಕೊಂಡ ಹಿರಿಯ ನಾಗರಿಕರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ.

45ರಿಂದ 60 ವರ್ಷದೊಳಗಿನ ಕೋವಿಡೇತರ ಕಾಯಿಲೆ ಎದುರಿಸುತ್ತಿರುವವರಲ್ಲಿ 2.54 ಲಕ್ಷ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಕೋವಿಡ್‌ ಮುಂಚೂಣಿ ಯೋಧರಲ್ಲಿ 1.94 ಲಕ್ಷ ಮಂದಿ ಮೊದಲ ಡೋಸ್ ಪಡೆದಿದ್ದಾರೆ. ಅವರಲ್ಲಿ 47,207 ಮಂದಿ ಎರಡನೇ ಡೋಸ್ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.