ಮೈಸೂರು: ಕನ್ನಡ ಸಾಹಿತ್ಯದ ಕಂಪನ್ನು ಹರಡಿಸುವ ಉದ್ದೇಶದಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾರಾಗೃಹಗಳತ್ತ ಹೆಜ್ಜೆ ಇಟ್ಟಿದೆ. ಓದು, ಬರವಣಿಗೆಯ ಅಭಿರುಚಿ ಬೆಳೆಸುವ ಆಶಯದಿಂದ ‘ಕಾರಾಗೃಹವಾಸಿಗಳಿಗೆ ಸಾಹಿತ್ಯ ಕಮ್ಮಟ’ ಹಮ್ಮಿಕೊಂಡಿದೆ.
ಈ ಯೋಜನೆಗೆ ನಗರದ ಕೇಂದ್ರ ಕಾರಾಗೃಹದಿಂದ ಚಾಲನೆ ನೀಡಲಾಗುತ್ತಿದೆ. ಮೇ 7ರಿಂದ 9ವರೆಗೆ ಕಮ್ಮಟ ಹಮ್ಮಿಕೊಳ್ಳಲಾಗಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಬಗ್ಗೆ ತಿಳಿಸಿಕೊಡುವ ಕಾರ್ಯಕ್ರಮ ರೂಪಿಸಲಾಗಿದೆ. ಕಾವ್ಯ, ಕಥೆ, ಕಾದಂಬರಿ, ರಂಗಭೂಮಿಯ ಅನುಕೂಲಗಳ ಬಗ್ಗೆ ಬೆಳಕು ಚೆಲ್ಲಲಾಗುವುದು. ಆ ವಾಸಿಗಳಲ್ಲಿನ ಸಾಹಿತ್ಯದ ಪ್ರತಿಭೆಗೆ ವೇದಿಕೆ ಕಲ್ಪಿಸುವ ಕೆಲಸವನ್ನೂ ಅಕಾಡೆಮಿ ಮಾಡಲಿದೆ.
ಇಲ್ಲಿನ ಕಮ್ಮಟದಲ್ಲಿ ಕಾರಾಗೃಹ ವಾಸಿಗಳಾದ ಆರ್.ರಾಮು, ಟಿ.ಎಂ. ವೆಂಕಟೇಶ್ ಕವನ ವಾಚಿಸುತ್ತಿರುವುದು ವಿಶೇಷ. ರಂಗಚಿಕಿತ್ಸೆ ಬಗ್ಗೆ ಲೇಖಕ ಗಣೇಶ ಅಮೀನಗಡ, ಕಾವ್ಯ ಜಗತ್ತಿನ ಕುರಿತು ಸಾಹಿತಿ ಪ್ರೊ.ಮೊರಬದ ಮಲ್ಲಿಕಾರ್ಜುನ, ಕಥಾ ಜಗತ್ತಿನ ಬಗ್ಗೆ ಕಥೆಗಾರ್ತಿ ದೀಪ್ತಿ ಭದ್ರಾವತಿ, ಕಾದಂಬರಿ ಜಗತ್ತಿನ ಕುರಿತು ಮಂಡ್ಯದ ಸರ್.ಎಂ.ವಿ. ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಎಚ್.ಟಿ.ವೆಂಕಟೇಶಮೂರ್ತಿ ಉಪನ್ಯಾಸ ನೀಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಸಾಹಿತಿ ರಾಜಪ್ಪ ದಳವಾಯಿ ಹಾಗೂ ಕವಯಿತ್ರಿ ಜಾಹಿದಾ ಪಾಲ್ಗೊಳ್ಳಲಿದ್ದಾರೆ. ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ್ ಸಹಕಾರ ನೀಡಿದ್ದಾರೆ.
ಇತರ ಜೈಲುಗಳಲ್ಲೂ
ಮುಂದೆ, ಬೆಳಗಾವಿಯ ಹಿಂಡಲಗಾ, ಬೆಂಗಳೂರಿನ ಪರಪ್ಪನ ಅಗ್ರಹಾರ, ಬಳ್ಳಾರಿ ಸೇರಿದಂತೆ ಯಾವ್ಯಾವ ಕಾರಾಗೃಹಗಳಲ್ಲಿ ಅವಕಾಶ ಸಿಗುತ್ತದೆಯೋ ಅಲ್ಲೆಲ್ಲಾ ಸಾಹಿತ್ಯ ಕಮ್ಮಟ ನಡೆಸಲು ಅಕಾಡೆಮಿ ಉದ್ದೇಶಿಸಿದೆ.
ಜೈಲುಗಳ ವಾಸಿಗಳ ಓದಿಗೆ ಅನುಕೂಲ ಆಗುವಂತೆ ಪುಸ್ತಕಗಳು ಬೇಕೆಂದರೆ ಅಕಾಡೆಮಿಯಿಂದ ಒದಗಿಸಲು, ಪ್ರಕಾಶಕರು ಅಥವಾ ಲೇಖಕರಿಂದಲೂ ಕೊಡಿಸಲೂ ಉದ್ದೇಶಿಸಲಾಗಿದೆ.
‘ಕನ್ನಡ ಸಾಹಿತ್ಯದ ಪ್ರಚಾರ ಎಲ್ಲ ಕಡೆಯೂ ಆಗಬೇಕೆಂಬ ಧ್ಯೇಯ ನಮ್ಮದು. ವಿಭಿನ್ನ ಹಿನ್ನೆಲೆ, ನೆಲೆಗಟ್ಟಿನ ಜನರು ಪಾಲ್ಗೊಳ್ಳುವಂತಹ ಸಂತೆಗಳಲ್ಲೂ ಆದಿಕವಿ ಪಂಪನ ಬಗ್ಗೆ ಮಾತನಾಡಬೇಕು ಎಂಬುದು ನನ್ನ ನಿಲುವು. ಕನ್ನಡ ಸಾಹಿತ್ಯ ಅತ್ಯಂತ ಮಾನವೀಯ ಮೌಲ್ಯಗಳನ್ನು ಹೊಂದಿದೆ. ಸೌಹಾರ್ದದ ಸೆಲೆಯನ್ನು ಒಳಗೊಂಡಿದೆ. ಇಂದಿನ ವಿಷಮ ಪರಿಸ್ಥಿತಿ ಹೋಗಲಾಡಿಸಲು ಅಗತ್ಯವಾದ ಸಾಂವಿಧಾನಿಕ ಆಶಯ, ಜಾತ್ಯತೀತ ಗುಣವೆಲ್ಲವನ್ನೂ ಸಾಹಿತ್ಯದ ಮೂಲಕ ಜನರಿಗೆ ಸುಲಭವಾಗಿ ತಲುಪಿಸಬಹುದು. ಈ ಕಾರಣದಿಂದ ಕಾರಾಗೃಹವಾಸಿಗಳನ್ನು ನಾವು ತಲುಪುತ್ತಿದ್ದೇವೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು..
‘ಕನ್ನಡ ಸಾಹಿತ್ಯ ಪರಂಪರೆಯಿಂದ ಜನರು ದೂರಾಗುತ್ತಿರುವುದರಿಂದಲೇ ಅಮಾನವೀಯ ಘಟನೆಗಳು ನಡೆಯುತ್ತಿವೆ. ಇದನ್ನು ತಪ್ಪಿಸಲು ಕನ್ನಡ ಸಾಹಿತ್ಯವನ್ನು ಪಸರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ತಪ್ಪು ಮಾಡಿದವರು, ಶಿಕ್ಷೆಗೆ ಒಳಗಾದವರು, ವಿಚಾರಣಾಧೀನ ಕೈದಿಗಳೂ ಕಾರಾಗೃಹದಲ್ಲಿ ಇರುತ್ತಾರೆ. ಅವರ ಮನಸ್ಸಿಗೆ ಸಮಾಧಾನ ನೀಡಬೇಕು ಹಾಗೂ ಕೊಂಚವಾದರೂ ಬದಲಾವಣೆ ತರಬೇಕೆಂದರೆ ಕಾವ್ಯ, ನಾಟಕ, ಕಥೆ, ಕಾದಂಬರಿಗಳ ಮೂಲಕ ನಾವು ಪ್ರವೇಶ ಮಾಡಬೇಕಾಗುತ್ತದೆ. ಹಿಂದಿನ ಹಾಗೂ ಈಚಿನ ಸಾಹಿತಿಗಳನ್ನೆಲ್ಲಾ ಅವರಿಗೆ ಪರಿಚಯಿಸಲಾಗುವುದು. ಅವರಿಗೆ ಹೊಸ ಬೆಳಕನ್ನು ತೋರಿಸುವ ಸದಾಶಯ ನಮ್ಮದು’ ಎನ್ನುತ್ತಾರೆ ಅವರು.
ಹಿಂದಿನಿಂದಲೂ ನಮ್ಮೊಂದಿಗೆ ಬೆಸೆದುಕೊಂಡಿರುವ ಕನ್ನಡದ ಕವಿಗಳು ನಮ್ಮ ಕಾಲದ ವಿದ್ವಾಂಸರು ಮಾನವೀಯ ಬದುಕಿಗೆ ಕೊಟ್ಟಿರುವ ಕೊಡುಗೆ ಅಪಾರವಾದುದು. ಅದನ್ನು ತಿಳಿಸಿಕೊಡುವ ಉದ್ದೇಶ ನಮ್ಮದು
–ಎಲ್.ಎನ್. ಮುಕುಂದರಾಜ್ ಅಧ್ಯಕ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ
‘ಸಂತೆಯಲ್ಲಿ ಪಂಪ’...
‘ಮಂಡ್ಯದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಕಾರ್ಯಕ್ರಮ ಮಾಡಿದ್ದೆವು. ಮುಂದೆ ‘ಸಂತೆಯಲ್ಲಿ ಪಂಪ’ ಕಾರ್ಯಕ್ರಮವನ್ನು ಕುಣಿಗಲ್ ಸಂತೆಯಲ್ಲಿ ಆಯೋಜಿಸುವ ಉದ್ದೇಶವಿದೆ. ರೈತರು ಪತ್ರಕರ್ತರು ಕಾರ್ಮಿಕರಿಗೂ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಚುಟವಟಿಕೆಗಳನ್ನು ನಡೆಸುವ ಯೋಜನೆ ಇದೆ’ ಎಂದು ಮುಕುಂದರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.