ADVERTISEMENT

ಪ್ರೌಢಶಾಲೆಯಿಂದಲೇ ಕೌಶಲ ತರಬೇತಿ: ಈ ವರ್ಷದಿಂದ ಜಾರಿ

ಮೊದಲ ಹಂತದಲ್ಲಿ 250 ಶಿಕ್ಷಣ ಸಂಸ್ಥೆಗಳ ಆಯ್ಕೆ

ಎ.ಎಂ.ಸುರೇಶ
Published 14 ಸೆಪ್ಟೆಂಬರ್ 2025, 20:39 IST
Last Updated 14 ಸೆಪ್ಟೆಂಬರ್ 2025, 20:39 IST
<div class="paragraphs"><p>ಶಿಕ್ಷಣ ಇಲಾಖೆ </p></div>

ಶಿಕ್ಷಣ ಇಲಾಖೆ

   

ಬೆಂಗಳೂರು: ಪ್ರೌಢಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ 'ಶಾಲೆಯಲ್ಲೇ ಕೌಶಲ’ ಎಂಬ ಕಾರ್ಯಕ್ರಮ ರೂಪಿಸಿದೆ.

ಮೊದಲ ಹಂತದಲ್ಲಿ 200 ಸರ್ಕಾರಿ ಪ್ರೌಢಶಾಲೆಗಳು ಹಾಗೂ 50 ಪದವಿ ಪೂರ್ವ ಕಾಲೇಜುಗಳನ್ನು ಗುರುತಿಸಿದ್ದು, ಒಟ್ಟು 7,500 ವಿದ್ಯಾರ್ಥಿಗಳಿಗೆ ಉನ್ನತೀಕರಿಸಿದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ಮೂಲಕ ತರಬೇತಿ ನೀಡಲಾಗುತ್ತದೆ. ಮುಂದಿನ ವರ್ಷ ಇನ್ನಷ್ಟು ಶಾಲಾ–ಕಾಲೇಜುಗಳಿಗೆ ಈ ಕಾರ್ಯಕ್ರಮ ವಿಸ್ತರಿಸಲಾಗುತ್ತದೆ.

ADVERTISEMENT

ಈಗಾಗಲೇ ಶಾಲಾ–ಕಾಲೇಜುಗಳನ್ನು ಗುರುತಿಸಿ, ಅಲ್ಲಿನ ವಿದ್ಯಾರ್ಥಿಗಳಿಗೆ ಯಾವ ಐಟಿಐನಲ್ಲಿ ತರಬೇತಿ ನೀಡಬೇಕು ಎಂಬುದನ್ನು ಅಂತಿಮಗೊಳಿಸಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಶಿಕ್ಷಣ ಇಲಾಖೆ ಭರಿಸಲಿದ್ದು, ತರಬೇತಿ ನೀಡುವ ಕೆಲಸವನ್ನು ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮಾಡಲಿದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕಿ ಕೆ.ವಿದ್ಯಾ ಕುಮಾರಿ ‘ಪ್ರಜಾವಾಣಿ’ಗೆ ತಿಳಿಸಿದರು. 

ವಾರದಲ್ಲಿ ಮೂರು ದಿನ, ನಿತ್ಯ ಎರಡು ಗಂಟೆ ಕಾಲ ಆಯಾ ಶಾಲೆ ಗಳೊಂದಿಗೆ ಮ್ಯಾಪಿಂಗ್‌ ಮಾಡಲಾದ ಐಟಿಐಗಳ ತರಬೇತುದಾರರು ಶಾಲೆಗಳಿಗೆ ತೆರಳಿ ತಾಂತ್ರಿಕ ತರಬೇತಿ ನೀಡುತ್ತಾರೆ. ಇದಕ್ಕಾಗಿ 30 ವಿದ್ಯಾರ್ಥಿಗಳಿಗೆ ಒಬ್ಬರಂತೆ 250 ತರಬೇತುದಾರರನ್ನು ಗುರುತಿಸ ಲಾಗಿದೆ. ಪ್ರಾಯೋಗಿಕ ತರಬೇತಿಯನ್ನು ಶಾಲೆಗಳಿಗೆ 10 ಕಿ.ಮೀ. ಅಂತರದಲ್ಲಿರುವ ಐಟಿಐಗಳಲ್ಲೇ ಶನಿವಾರ ನಾಲ್ಕು ಗಂಟೆ ನೀಡಲಾಗುತ್ತದೆ. 

ಈ ಕಾರ್ಯಕ್ರಮದಡಿ ವಿದ್ಯಾರ್ಥಿ ಗಳಿಗೆ ಇಂಟರ್ನ್‌ಶಿಪ್‌ ಕಡ್ಡಾಯ ವಾಗಲಿದೆ. ಪ್ರೌಢಶಾಲಾ ಹಂತದಲ್ಲಿ 8, 9ನೇ ತರಗತಿ ಹಾಗೂ ಕಾಲೇಜು ಹಂತದಲ್ಲಿ ಮೊದಲ ಪಿಯುಸಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಹೆಚ್ಚು ಮಕ್ಕಳು ದಾಖಲಾತಿ ಇರುವ ಶಾಲಾ–ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ. ತರಬೇತಿಗಾಗಿ ಈ ವರ್ಷ ₹5.25 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಿದ್ದು, ಇದನ್ನು ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ ಅಡಿ ಭರಿಸಲಾಗುತ್ತದೆ.

ಜೂನಿಯರ್‌ ಟೆಕ್ನಿಷಿಯನ್‌ ಕೋರ್ಸ್‌

ವಿದ್ಯಾರ್ಥಿಗಳಿಗೆ ವಿವಿಧ ಕೌಶಲಗಳ ಬಗ್ಗೆ ತಿಳಿಸಿಕೊಡುವ ಇದಕ್ಕೆ ಜೂನಿಯರ್‌ ಟೆಕ್ನಿಷಿಯನ್‌ ಕೋರ್ಸ್‌ ಎಂದು ಹೆಸರಿಡಲಾಗಿದೆ. ಆಟೊಮೊಬೈಲ್‌, ಆಟೊ ಮಿಷನ್‌, ಪ್ಲಂಬಿಂಗ್‌, ಎಲೆಕ್ಟ್ರಿಕ್‌ ವಾಹನಗಳ ನಿರ್ವಹಣೆ–ರಿಪೇರಿ, ಇಂಟರ್‌ನೆಟ್‌, ಬೇಸಿಕ್‌ ಕಂಪ್ಯೂಟರ್‌ ಇತ್ಯಾದಿಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಈ ಕಾರ್ಯಕ್ರಮದ ವಿನ್ಯಾಸ ಹಾಗೂ ಮಹತ್ವದ ಬಗ್ಗೆ ಪೋಷಕರಿಗೂ ಅರಿವು ಮೂಡಿಸಲಾಗುತ್ತದೆ. ಸಾಂಪ್ರದಾಯಿಕ ಶಿಕ್ಷಣದ ಜೊತೆಯಲ್ಲೇ ವಿವಿಧ ಕೌಶಲಗಳ ಬಗ್ಗೆ ಥಿಯರಿ ಮತ್ತು ಪ್ರಾಯೋಗಿಕವಾಗಿ ಹೇಗೆ ಕಲಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಮುಂದೆ ಉದ್ಯೋಗ ಆಯ್ಕೆ ಮಾಡಿಕೊಳ್ಳಲು, ಭವಿಷ್ಯ ರೂಪಿಸಿಕೊಳ್ಳಲು ಯಾವ ರೀತಿ ನೆರವಾಗಲಿದೆ ಎಂದು ಪೋಷಕರಿಗೆ ಮನವರಿಕೆ ಮಾಡಲಾಗುತ್ತದೆ.

ಕಾರ್ಯಕ್ರಮದ ಉದ್ದೇಶವೇನು?

  • ವಿದ್ಯಾರ್ಥಿಗಳಿಗೆ ಕಲಿಕೆಯ ಹಂತದಲ್ಲೇ ಕೌಶಲ ಶಿಕ್ಷಣ ನೀಡುವುದು

  • ಉದ್ಯಮದ ಕೌಶಲಗಳನ್ನು ವೃದ್ಧಿಸುವ ಮೂಲಕ ಉತ್ತಮ ಉದ್ಯೋಗ ಅವಕಾಶ ಕಲ್ಪಿಸುವುದು

  • ಥಿಯರಿಯೊಂದಿಗೆ ಪ್ರಾಯೋಗಿಕ ಕಲಿಕೆಗೂ ಉತ್ತೇಜನ

  • ವಿದ್ಯಾರ್ಥಿಗಳಿಗೆ ಮುಂದಿನ ವೃತ್ತಿಗಳ ಆಯ್ಕೆಗೆ ನೆರವಾಗುವುದು

ತರಬೇತಿಗೆ ಬೇಕಾದ ಸಿದ್ಧತೆಗಳು ಆಗಿದ್ದು 15ರಿಂದ 20 ದಿನಗಳಲ್ಲಿ ಶುರು ಮಾಡುತ್ತೇವೆ. ನಮ್ಮಲ್ಲಿರುವ ಸಿಬ್ಬಂದಿ ಸಾಕಾಗದಿದ್ದರೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುತ್ತೇವೆ.
– ರಾಗಪ್ರಿಯ, ಆಯುಕ್ತರು, ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.