ADVERTISEMENT

ರಫ್ತಿನಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನಕ್ಕೆ ಏರಬೇಕು– ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 9:25 IST
Last Updated 22 ಜುಲೈ 2023, 9:25 IST
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ   

ಬೆಂಗಳೂರು: ‘ಬಂಡವಾಳ ಹೂಡಿಕೆ ಹೆಚ್ಚಾಗಬೇಕಾದರೆ ಕೈಗಾರಿಕೆಗೆ ಪ್ರೋತ್ಸಾಹದ ವಾತಾವರಣ ಇರಬೇಕು. ಅಂತಹ ವಾತಾವರಣ ಕರ್ನಾಟಕದಲ್ಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಶನಿವಾರ ನಡೆದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ‘ರಫ್ತಿನಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡು ಒಂದು ಮತ್ತು ಎರಡನೇ ಸ್ಥಾನದಲ್ಲಿವೆ. ಕರ್ನಾಟಕ ನಂಬರ್ ಒನ್ ಸ್ಥಾನಕ್ಕೆ ಏರಬೇಕು’ ಎಂದು ಆಶಿಸಿದರು.

‘ರಫ್ತಿನಲ್ಲಿ ಸಾಧನೆ ಮಾಡಿರುವ ಉದ್ದಿಮೆಗಳಿಗೆ 1992-93 ರಿಂದ ಶ್ರೇಷ್ಠ ರಫ್ತು ಪ್ರಶಸ್ತಿಗಳನ್ನು ನೀಡುವ ಪರಿಪಾಠ ಆರಂಭಿಸಲಾಗಿದೆ. ಇಂದು 68 ಉದ್ದಿಮೆಗಳಿಗೆ ಶ್ರೇಷ್ಠ ರಫ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದ ಉದ್ದಿಮೆಗಳನ್ನು ಆಯ್ಕೆ ಮಾಡಲಾಗಿದೆ’ ಎಂದರು

ADVERTISEMENT

‘ರಫ್ತು ಮಾಡುವುದರಲ್ಲಿ ಕರ್ನಾಟಕ ಮೊದಲಿನಿಂದಲೂ ಮುಂಚೂಣಿಯಲ್ಲಿದೆ. ಕೌಶಲ ತರಬೇತಿಯುಳ್ಳ ಕಾರ್ಮಿಕರಿದ್ದರೆ ಕೈಗಾರಿಕಾ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಕೌಶಲಾಭಿವೃದ್ಧಿ ಇಲಾಖೆ ಆರಂಭಿಸಲಾಗಿತ್ತು. ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು’ ಎಂದರು.

‘ಹೊಸ ಕೈಗಾರಿಕಾ ನೀತಿಯನ್ನು ಸರ್ಕಾರ ಘೋಷಣೆ ಮಾಡಿದಾಗ ಕೈಗಾರಿಕೋದ್ಯಮಿಗಳು ನೀತಿಯನ್ನು ಬೆಂಬಲಿಸಿ ಅದನ್ನು ಸ್ವಾಗತಿಸಿದರು. ಈಗಲೂ ಎಲ್ಲರೊಂದಿಗೆ ಚರ್ಚಿಸಿ ರಫ್ತು ಬೆಳವಣಿಗೆಗೆ ಪೂರಕವಾಗುವ ಕೈಗಾರಿಕಾ ನೀ ರೂಪಿಸಲಾಗುವುದು‘ ಎಂದರು.

‘ಕೈಗಾರಿಕೆ ಬೆಳೆದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ಆರ್ಥಿಕತೆ ಬೆಳೆಯಲು ನೆರವಾಗಲಿದೆ. ಜಿಡಿಪಿ ಬೆಳೆದು ರಾಜ್ಯ ಬೆಳೆಯಲು ಸಾಧ್ಯವಾಗಿ ರಾಷ್ಟ್ರದ ಜಿಡಿಪಿಗೆ ದೊಡ್ಡ ಕೊಡುಗೆಯನ್ನು ರಾಜ್ಯದಿಂದ ಕೇಂದ್ರಕ್ಕೆ ಕೊಡಲು ಸಾಧ್ಯವಾಗುತ್ತದೆ. ಇವೆಲ್ಲ ಒಂದಕ್ಕೊಂದು ಸಂಬಂಧ ಹೊಂದಿದೆ. ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ಹೂಡಿಕೆಗಳು ಬರುತ್ತವೆ. ಹೂಡಿಕೆಗಳು ಬಂದಲ್ಲಿ ಕೈಗಾರಿಕೆಗಳು ಬಂದು ನಿರುದ್ಯೋಗ ನಿವಾರಣೆಯಾಗುತ್ತದೆ. ಕರ್ನಾಟಕದ ಲ್ಲಿ ಉತ್ತಮ ಕಾನೂನು ಸುವ್ಯವಸ್ಥೆ ಕಲ್ಪಿಸಲಾಗುವುದು. ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಉದ್ಯೋಗಿಗಳನ್ನು ಸೃಷ್ಟಿ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ‘ ಎಂದರು

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಉದ್ಯೋಗ ಸೃಷ್ಟಿ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶ. ಎರಡನೇ, ಮೂರನೇ ಹಂತ ನಗರಗಳಲ್ಲಿ ಉದ್ಯೋಗ ಸೃಷಿಗೆ ಉದ್ಯಮಿಗಳು ಮುಂದಾಗ‌ಬೇಕು. ಬೆಂಗಳೂರಿನ ಒತ್ತಡ ಕಡಿಮೆ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ ಆಗಬೇಕು’ ಎಂದರು.

ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್, ಶಾಸಕರಾದ ರಿಜ್ವಾನ್ ಅರ್ಷದ್, ಶಾಮನೂರು ಶಿವಶಂಕರಪ್ಪ, ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.