ADVERTISEMENT

ರಾಜ್ಯದ ಯುವಜನರ ಕೌಶಲಾಭಿವೃದ್ಧಿಗೆ ಕೊಟ್ಟಿದ್ದು ₹541 ಕೋಟಿ– ಬಳಕೆ ₹230 ಕೋಟಿ

ಕೌಶಲಾಭಿವೃದ್ಧಿಗೆ ಸರ್ಕಾರ ದುಡ್ಡು ಕೊಟ್ಟರೂ ತರಬೇತಿ ನೀಡದ ಇಲಾಖೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 20:49 IST
Last Updated 21 ಆಗಸ್ಟ್ 2025, 20:49 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ರಾಜ್ಯದ ಯುವಜನರ ಕೌಶಲಾಭಿವೃದ್ಧಿಗೆಂದು ರಾಜ್ಯ ಸರ್ಕಾರವು ನೀಡಿದ್ದು ₹541.11 ಕೋಟಿ. ಆದರೆ ಕೌಶಲಾಭಿವೃದ್ಧಿ ಇಲಾಖೆಯು ಅದರಲ್ಲಿ ಬಳಸಿಕೊಂಡಿದ್ದು ₹230 ಕೋಟಿ ಮಾತ್ರ.

ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ಇಲಾಖೆಯು ವಿಫಲವಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ. ವಿಧಾನ ಪರಿಷತ್ತಿನಲ್ಲಿ ಗುರುವಾರ ಮಂಡಿಸಲಾದ ‘2028–2023ರ ಅವಧಿಯ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ ಸಂಖ್ಯೆ–06’ರಲ್ಲಿ ಈ ಮಾಹಿತಿ ಇದೆ.

ADVERTISEMENT

ಯುವಜನರಲ್ಲಿ ಉದ್ಯೋಗಾರ್ಹತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು 2018ರಲ್ಲಿ, ‘ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ’ ರೂಪಿಸಿತ್ತು. ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತ್ತು.

‘2017–18ರಿಂದ 2022–23ರವರೆಗಿನ ಆರು ಆರ್ಥಿಕ ವರ್ಷಗಳಲ್ಲಿ ಸರ್ಕಾರವು ಈ ಯೋಜನೆಗೆಂದು ಒಟ್ಟು ₹549.18 ಕೋಟಿ ಹಂಚಿಕೆ ಮಾಡಿತ್ತು. ಇದರಲ್ಲಿ ₹541.11 ಕೋಟಿಯನ್ನು ಬಿಡುಗಡೆಯೂ ಮಾಡಿತ್ತು. ಆದರೆ ಕೌಶಲ್ಯಾಭಿವೃದ್ಧಿಗೆ ಬಳಕೆಯಾಗಿದ್ದು ₹230.01 ಕೋಟಿಯಷ್ಟೆ’ ಎಂದು ಸಿಎಜಿ ಹೇಳಿದೆ.

‘ಬಿಡುಗಡೆಯಾದ ಅನುದಾನವು ಬಳಕೆಯಾಗದ ಕಾರಣ ₹173.55 ಕೋಟಿ ಸರ್ಕಾರಕ್ಕೆ ವಾಪಸಾಯಿತು. ₹230.02 ಕೋಟಿ ತರಬೇತಿಗೆ ಬಳಕೆಯಾಗಿದ್ದರೆ, ₹119.89 ಕೋಟಿಯನ್ನು ಇಲಾಖೆಯು ತನ್ನ ಬಳಿಯೇ ಉಳಿಸಿಕೊಂಡಿದೆ. ಅನುದಾನವನ್ನು ಸದುಪಯೋಗ ಮಾಡಿಕೊಳ್ಳುವ ಹೊಣೆಯನ್ನು ನಿರ್ವಹಣೆ ಮಾಡಿಲ್ಲ. ಸರ್ಕಾರಕ್ಕೆ ಪೂರ್ಣ ಹಣವನ್ನು ಹಿಂದಿರುಗಿಸಿಯೂ ಇಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

‘ಸರ್ಕಾರವು ಈ ಬಗ್ಗೆ ಗಮನಹರಿಸಿ, ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಉದ್ಯೋಗಾರ್ಹತೆ ಹೆಚ್ಚಿಸಿ, ನಿರುದ್ಯೋಗ ನಿವಾರಣೆಯಲ್ಲಿ ಮಹತ್ವದ ಪಾತ್ರವಹಿಸುವ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು’ ಎಂದು ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.