
ಬೆಂಗಳೂರು: ಮೀಸಲಿಟ್ಟ ಅನುದಾನಕ್ಕಿಂತ ಸರಿಸುಮಾರು ದ್ವಿಗುಣ ಮೊತ್ತದ ಯೋಜನೆಗಳನ್ನು ಕೈಗೆತ್ತಿಕೊಂಡ ಕಾರಣ ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲಾದ ಸ್ಮಾರ್ಟ್ ಸಿಟಿ ಯೋಜನೆಗಳು ನಿರೀಕ್ಷಿತ ಗುರಿ ಸಾಧಿಸಲು ವಿಫಲವಾದವು ಎಂದು ಮಹಾಲೇಖಪಾಲರ ವರದಿ ಹೇಳಿದೆ.
ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರು ನಗರಗಳಲ್ಲಿ 2015–16ರಿಂದ ಸ್ಮಾರ್ಟ್‌ಸಿಟಿ ಯೋಜನೆಗಾಗಿ ₹817 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ, ₹1,462 ಕೋಟಿ ಮೊತ್ತದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಮಾದರಿಯಾಗಿ ಆಯ್ಕೆ ಮಾಡಲಾದ ನಾಲ್ಕು ವಿಶೇಷ ಘಟಕಗಳಿಗೆ ₹200 ಕೋಟಿ ನಿಗದಿ ಮಾಡಿದ್ದರೂ ನೈಜ ಬಂಡವಾಳ ₹10 ಲಕ್ಷ ಇತ್ತು. ಇತರೆ ಕಾಮಗಾರಿಗಳೂ ಸರ್ಕಾರದ ಮೇಲೆ ಅವಲಂಬಿತವಾದವು. ಹಾಗಾಗಿ 645 ಯೋಜನೆಗಳಲ್ಲಿ 45 ಯೋಜನೆಗಳಷ್ಟೇ ನಿಗದಿತ ಅವಧಿಯ ಒಳಗೆ ಪೂರ್ಣಗೊಂಡಿವೆ. ₹186.79 ಕೋಟಿ ಮೊತ್ತದ ಯೋಜನೆಗಳು ನಿರ್ದಿಷ್ಟಪಡಿಸಿದ ಗುರಿಗಳೊಂದಿಗೆ ಹೊಂದಿಕೆಯಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸ್ಮಾರ್ಟ್ ನಗರಗಳು ಕೈಗೊಂಡಿರುವ ಯೋಜನೆಗಳು ದೀರ್ಘಕಾಲ ಉಳಿಯಲು ಸರ್ಕಾರದ ಅನುದಾನ ಹೊರತಾದ ಸಂಪನ್ಮೂಲಗಳನ್ನು ಬಳಕೆ ಮಾಡಬೇಕು. ಪೂರ್ಣಾವಧಿಯ ಸಿಇಒಗಳನ್ನು ನೇಮಕ ಮಾಡಬೇಕು. ಟೆಂಡರ್ ಪ್ರಕ್ರಿಯೆ ವಿಳಂಬ ತಪ್ಪಿಸಬೇಕು. ತಂತ್ರಜ್ಞಾನ ಬಳಕೆಯಲ್ಲಿ ಎಚ್ಚರ ವಹಿಸಬೇಕು, ತಜ್ಞರ ಶಿಫಾರಸುಗಳನ್ನು ಪಾಲಿಸಬೇಕು. ಅಗತ್ಯ ಕಾಮಗಾರಿಗಳ ಮೇಲ್ವಿಚರಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರಾತಿನಿಧ್ಯ ಇರಬೇಕು. ಗುಣಮಟ್ಟ ಪರಿಶೀಲನೆಗೆ ಮೇಲ್ವಿಚಾರಣಾ ಸಲಹೆಗಾರರನ್ನು ರಾಜ್ಯ ಸರ್ಕಾರ ನೇಮಿಸಬೇಕು. ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಕೆಲ ಮಾರ್ಪಾಡು ಮಾಡಲು ಅವಕಾಶ ನೀಡಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.