ADVERTISEMENT

ಪ್ರಧಾನಿ ಮೋದಿಗೆ ಚೀನಾದ ಸರಕುಗಳನ್ನು ನಿಷೇಧಿಸುವ ಧೈರ್ಯವಿಲ್ಲವೇ?: ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2024, 7:47 IST
Last Updated 14 ಡಿಸೆಂಬರ್ 2024, 7:47 IST
   

ಬೆಂಗಳೂರು: ಒಂದು ಫೋನ್ ಕರೆಯಿಂದ ರಷ್ಯಾ- ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿಯವರಿಗೆ ಚೀನಾದಿಂದ ಆಮದಾಗುತ್ತಿರುವ ಸರಕುಗಳನ್ನು ನಿಷೇಧಿಸುವ ಧೈರ್ಯವಿಲ್ಲವೇ? ಎಂದು ರಾಜ್ಯ ಕಾಂಗ್ರೆಸ್‌ ಪ್ರಶ್ನಿಸಿದೆ.

'ಕೇವಲ ಟಿಕ್ ಟಾಕ್, ಶೇರ್ ಚಾಟ್ ನಂತಹ 59 ಚೀನಿ ಆ್ಯಪ್‌ಗಳನ್ನು ಬ್ಯಾನ್ ಮಾಡಲು ಎಲ್ಲಿಲ್ಲದ ಆಸಕ್ತಿ ತೋರಿದ ಪ್ರಧಾನಿ ಮೋದಿಯವರು, ಚೀನಾದಿಂದ ಆಮದಾಗುತ್ತಿರುವ ಸರಕುಗಳನ್ನು ನಿಷೇಧಿಸುವುದಕ್ಕೆ ಮಾತ್ರ ಹಿಂಜರಿಯುತ್ತಿದ್ದಾರೆ' ಎಂದು ರಾಜ್ಯ ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

2013- 14ರ ಯುಪಿಯ ಸರ್ಕಾರದ ಅವಧಿಯಲ್ಲಿ ಚೀನಾದಿಂದ ಭಾರತಕ್ಕೆ ₹ 4.35 ಲಕ್ಷ ಕೋಟಿ ಮೌಲ್ಯದಷ್ಟು ಸರಕುಗಳು ಆಮದಾಗಿತ್ತು. ಆದರೆ 2023-24ರ ಮೋದಿ ಸರ್ಕಾರದಲ್ಲಿ ₹ 8.62 ಲಕ್ಷ ಕೋಟಿ ಮೌಲ್ಯದಷ್ಟು ಸರಕುಗಳು ಆಮದಾಗಿವೆ. ಕೇವಲ 10 ವರ್ಷಗಳಲ್ಲಿ ಚೀನಾದಿಂದ ಆಮದಾಗುತ್ತಿರುವ ಸರಕುಗಳ ಮೌಲ್ಯ ದುಪ್ಪಟ್ಟಾಗಿದೆ.

ADVERTISEMENT

ಚೀನಾದಿಂದ ಆಮದಾಗುತ್ತಿರುವ ಸರಕುಗಳಿಂದ ಚನ್ನಪಟ್ಟಣದ ಬೊಂಬೆ ತಯಾರಿಸುವಂತಹ ಗುಡಿ ಕೈಗಾರಿಕೆಗಳು, ಸ್ವದೇಶಿ ಉತ್ಪಾದನಾ ವಲಯಕ್ಕೆ ಹೊಡೆತ ಬಿದ್ದಿದ್ದಲ್ಲದೇ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ಯಮಗಳು ಹಾಗೂ ಅನೇಕ ಕಾರ್ಖಾನೆಗಳಿಗೆ ಬೀಗ ಬೀಳುವಂತಾಗಿದೆ ಎಂದು ಕಾಂಗ್ರೆಸ್‌ ದೂರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.