ADVERTISEMENT

ಆದಾಯ ಸಂಗ್ರಹದಲ್ಲಿ ಹಿನ್ನಡೆ; ₹8.14 ಲಕ್ಷ ಕೋಟಿ ಗಡಿ ದಾಟಲಿದೆ ರಾಜ್ಯದ ಸಾಲ

GST ಸ್ಲ್ಯಾಬ್‌ ಪರಿಷ್ಕರಣೆಯಿಂದ ನಷ್ಟ

ಜಯಸಿಂಹ ಆರ್.
Published 3 ಮಾರ್ಚ್ 2026, 21:44 IST
Last Updated 3 ಮಾರ್ಚ್ 2026, 21:44 IST
<div class="paragraphs"><p>ವಿಧಾನಸೌಧ </p></div>

ವಿಧಾನಸೌಧ

   

ಬೆಂಗಳೂರು: ಇದೇ ತಿಂಗಳ ಅಂತ್ಯದ ಹೊತ್ತಿಗೆ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತ ₹8.14 ಲಕ್ಷ ಕೋಟಿಯ ಗಡಿ ದಾಟಲಿದೆ. 2025–26ನೇ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರವು ಬಡ್ಡಿ ಪಾವತಿಗೆಂದೇ ಅಂದಾಜು ₹48,000 ಕೋಟಿ ವೆಚ್ಚ ಮಾಡುತ್ತಿದೆ.

2025ರ ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದಾಗ, 2025–26ನೇ ಸಾಲಿನ ಬಜೆಟ್‌ನಲ್ಲಿ ₹90,428 ಕೋಟಿಯಷ್ಟು ವಿತ್ತೀಯ ಕೊರತೆಯನ್ನು ಅಂದಾಜಿಸಿದ್ದರು.

ADVERTISEMENT

ರಾಜ್ಯದ ಒಟ್ಟು ಸಾಲವು, ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇ 25ಕ್ಕಿಂತಲೂ (ಶೇ 24.91ರಷ್ಟು) ಕಡಿಮೆ ಇದ್ದು, ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಅವರು ಬಜೆಟ್‌ ಭಾಷಣದಲ್ಲಿ ಹೇಳಿದ್ದರು. ಆದರೆ, ಅವರ ಅಂದಾಜು ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಏರುಪೇರಾಗುವ ಸೂಚನೆ ಕಾಣಿಸಿದೆ. ಅಂದಾಜಿಸಿದಂತೆಯೇ ರಾಜ್ಯದ ಒಟ್ಟು ಸಾಲ ₹8.14 ಲಕ್ಷ ಕೋಟಿಯಷ್ಟಾದರೆ, ಆರ್ಥಿಕ ಶಿಸ್ತಿನ ಮಿತಿಯನ್ನು ಮೀರಿದಂತಾಗುತ್ತದೆ.

ಇದೇ ಮಾರ್ಚ್‌ ಅಂತ್ಯದ ವೇಳೆಗೆ ರಾಜ್ಯದ ಒಟ್ಟು ಸಾಲವು ₹7.64 ಲಕ್ಷ ಕೋಟಿಯಷ್ಟಾಗಬಹುದು ಮತ್ತು ಬಡ್ಡಿ ಪಾವತಿಗೆ ₹45,600 ಕೋಟಿ ವೆಚ್ಚ ಮಾಡಬೇಕಾಗಬಹುದು ಎಂದು ಬಜೆಟ್‌ನಲ್ಲಿ ಅಂದಾಜಿಸಲಾಗಿತ್ತು. ಆದರೆ, ವಾಣಿಜ್ಯ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಆಗಿರುವ ಹಿನ್ನಡೆ ಹಾಗೂ ಬಹುಮುಖ್ಯವಾಗಿ ಜಿಎಸ್‌ಟಿ ಸ್ಲ್ಯಾಬ್‌ಗಳ ಪರಿಷ್ಕರಣೆಯಿಂದಾಗಿ ರಾಜ್ಯದ ವಿತ್ತೀಯ ಕೊರತೆಯು, ಬಜೆಟ್‌ ಅಂದಾಜಿಗಿಂತ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಪರಿಣಾಮವಾಗಿ ರಾಜ್ಯದ ಸಾಲದ ಮೊತ್ತ ಹೆಚ್ಚಾಗಲಿದೆ.

2025–26ರ ಅಂತ್ಯದ ವೇಳೆಗೆ ಒಟ್ಟು ಸಾಲದ ಮೊತ್ತ ₹8.14 ಲಕ್ಷ ಕೋಟಿಯಷ್ಟಾಗಲಿದೆ ಮತ್ತು ಇದು ರಾಜ್ಯದ ಜಿಎಸ್‌ಡಿಪಿಯ ಶೇ 26.5ರಷ್ಟಾಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಂದಾಜಿಸಿದೆ.

ಹೀಗಿದ್ದೂ ಆರ್ಥಿಕ ಶಿಸ್ತಿನ ವಿಚಾರದಲ್ಲಿ ರಾಜ್ಯವು, ದಕ್ಷಿಣ ಭಾರತದ ಇತರ ರಾಜ್ಯಗಳಿಗಿಂತ ಉತ್ತಮ ಸ್ಥಿತಿಯಲ್ಲಿಯೇ ಇರಲಿದೆ ಎಂಬುದನ್ನೂ ಆರ್‌ಬಿಐನ ‘ರಾಜ್ಯಗಳ ಆರ್ಥಿಕತೆ: ಬಜೆಟ್‌ಗಳ ಅಧ್ಯಯನ’ ವರದಿಯಲ್ಲಿನ ದತ್ತಾಂಶಗಳು ಹೇಳುತ್ತವೆ. ಸಿದ್ದರಾಮಯ್ಯ ಅವರು ಈ ವಾರದಲ್ಲಿಯೇ ಮಂಡಿಸಲಿರುವ ಮುಂದಿನ ಬಜೆಟ್‌ನಲ್ಲಿ ಆರ್ಥಿಕ ಶಿಸ್ತನ್ನು ಹೇಗೆ ಕಾಪಾಡಿಕೊಳ್ಳಲಿದ್ದಾರೆ ಎಂಬುದನ್ನು ನೋಡಬೇಕಿದೆ.

2028–29ಕ್ಕೆ ₹10.17 ಲಕ್ಷ ಕೋಟಿ ಸಾಲ: 2025–26ನೇ ಮಧ್ಯಮಾವಧಿ ವಿತ್ತೀಯ ಮುನ್ನಂದಾಜಿನ ಪ್ರಕಾರ 2028–29ನೇ ಆರ್ಥಿಕ ವರ್ಷದ ಅಂತ್ಯದ ಹೊತ್ತಿಗೆ ರಾಜ್ಯದ ಒಟ್ಟು ಸಾಲವು ₹10.17 ಲಕ್ಷ ಕೋಟಿಯಷ್ಟಾಗಲಿದೆ.

ಮುಂಬರುವ ಆರ್ಥಿಕ ವರ್ಷಗಳಲ್ಲಿ ವೇತನ–ಪಿಂಚಣಿ ಮತ್ತಿತರ ಬದ್ಧ ವೆಚ್ಚಗಳಲ್ಲಿ ಏರಿಕೆಯಾಗುವ ಸಾಧ್ಯತೆ ನಿಚ್ಚಳವಾಗಿರುವ ಕಾರಣ, ರಾಜ್ಯದ ಮೇಲಿನ ಹಣಕಾಸು ಹೊರೆಯೂ ಹೆಚ್ಚಾಗಲಿದೆ. ಈ ಹೊರೆಗಳ ನಿರ್ವಹಣೆಗೆ ಸಾಲದ ಮೇಲಿನ ಅವಲಂಬನೆ ಅನಿವಾರ್ಯ ಎಂಬುದನ್ನು ಮುನ್ನಂದಾಜಿನಲ್ಲಿ ಉಲ್ಲೇಖಿಸಲಾಗಿದೆ.

ದಕ್ಷಿಣದಲ್ಲಿ ಕರ್ನಾಟಕದ್ದೇ ಉತ್ತಮ ಸ್ಥಿತಿ

ರಾಜ್ಯದ ಒಟ್ಟು ಸಾಲದ ಮೊತ್ತ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದ ಸ್ಥಿತಿ ಉತ್ತಮವಾಗಿಯೇ ಇದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಹೋಲಿಕೆಯಲ್ಲಿ ಒಟ್ಟು ಸಾಲದ ಶೇಕಡಾವಾರು ಪ್ರಮಾಣವು ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡಿಗಿಂತ ಕರ್ನಾಟಕದ್ದೇ ಕಡಿಮೆ ಎಂಬುದನ್ನು ಆರ್‌ಬಿಐನ ‘ರಾಜ್ಯಗಳ ಆರ್ಥಿಕತೆ: ಬಜೆಟ್‌ಗಳ ಅಧ್ಯಯನ’ ವರದಿಯ ದತ್ತಾಂಶಗಳು ಹೇಳುತ್ತವೆ.

ಗೋವಾ (25.7%), ಗುಜರಾತ್‌ (17.9%), ಉತ್ತರಾಖಂಡ (25.3%), ಒಡಿಶಾ (20.3%), ಜಾರ್ಖಂಡ್‌ (25.4%) ಮತ್ತು ಮಹಾರಾಷ್ಟ್ರ (19%) ಬಿಟ್ಟರೆ, ಉಳಿದೆಲ್ಲಾ ರಾಜ್ಯಗಳಿಗಿಂತ ಕರ್ನಾಟಕದ ಸಾಲದ ಪ್ರಮಾಣ ಕಡಿಮೆಯೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.