ADVERTISEMENT

ಗಣಿತ ಕಲಿಕೆ: ಕರೆ ಮಾಡುವ ಶಿಕ್ಷಕರಿಗೆ ₹800

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 16:18 IST
Last Updated 15 ಜುಲೈ 2025, 16:18 IST
   

ಬೆಂಗಳೂರು: ಸರ್ಕಾರಿ ಶಾಲೆಗಳ 3 ರಿಂದ 8ನೇ ತರಗತಿಯ ಮಕ್ಕಳಿಗಾಗಿ ರೂಪಿಸಿರುವ ‘ಗಣಿತ–ಗಣಕ’ ಕಲಿಕೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದ್ದು, ಪ್ರತಿಯೊಬ್ಬ ಶಿಕ್ಷಕರಿಗೂ ₹800 ಭತ್ಯೆ ನೀಡಲು ಆದೇಶ ಹೊರಡಿಸಿದೆ.

ಶಾಲಾ ಅವಧಿ ಮುಗಿಸಿ ಮಕ್ಕಳು ಮನೆಗೆ ತೆರಳಿದ ನಂತರ ಶಿಕ್ಷಕರು ವಾರಕ್ಕೆ ಒಂದು ದಿನ ಮೂಲ ಗಣಿತದ ಪರಿಕಲ್ಪನೆ, ಸಮಸ್ಯೆಗಳನ್ನು ಮೊಬೈಲ್‌ ಕರೆ ಮಾಡಿ ಪರಿಹರಿಸಬೇಕಿದೆ. ರಾಜ್ಯದಲ್ಲಿನ 38,548 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 3ರಿಂದ 8ನೇ ತರಗತಿಯ 13.51 ಲಕ್ಷ ಮಕ್ಕಳು ಕಲಿಯುತ್ತಿದ್ದಾರೆ. ಇಂತಹ ಮಕ್ಕಳಿಗೆ ತರಗತಿ ಅವಧಿಯ ನಂತರ ಕರೆ ಮಾಡಲು 75,000 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಮೊಬೈಲ್‌ ಕರೆ ಭತ್ಯೆ ನೀಡಲು ₹60 ಕೋಟಿ ಬಿಡುಗಡೆ ಮಾಡಲಾಗಿದೆ.

ಶಿಕ್ಷಕರು ಪ್ರತಿ ವಿದ್ಯಾರ್ಥಿಗೆ ವಾರಕ್ಕೆ ಒಮ್ಮೆ ಕರೆ ಮಾಡಿ 30ರಿಂದ 40 ನಿಮಿಷ ಗಣಿತ ವಿಷಯ ಕುರಿತು ಮಾಹಿತಿ ಒದಗಿಸಲಿದ್ದಾರೆ. ಪೋಷಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಒಬ್ಬ ಶಿಕ್ಷಕರಿಗೆ 18–20 ವಿದ್ಯಾರ್ಥಿಗಳ ಗುಂಪು ನಿಗದಿ ಮಾಡಲಾಗಿದೆ.

ADVERTISEMENT

ಶಿಕ್ಷಕರಿಗೂ ವಾರಕ್ಕೆ ಒಂದು ದಿನ ಕನಿಷ್ಠ 45 ನಿಮಿಷ ಮೊಬೈಲ್‌ ಫೋನ್‌ಗಳ ಮೂಲಕ ವಿಶೇಷ ತರಗತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪರಿಕಲ್ಪನೆಗಳನ್ನು ವಿವರಿಸಲು, ಗಣಿತದ ಸಮಸ್ಯೆಗಳನ್ನು ಪರಿಹರಿಸಲು ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಗಳು ನೆರವಾಗುತ್ತಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.