ಬೆಂಗಳೂರು: ‘ಬಾಹ್ಯಾಕಾಶ ಕ್ಷೇತ್ರದ ಉದ್ಯಮಗಳು ಮತ್ತು ವಿದ್ಯುನ್ಮಾನ ಉಪಕರಣಗಳ ಬಿಡಿಭಾಗಗಳ ತಯಾರಿಕಾ ಪಾರ್ಕ್‌ಗಳಿಗೆ ಸರ್ಕಾರದ ಕಡೆಯಿಂದ ನೀಡಬಹುದಾದ ರಿಯಾಯಿತಿ ಮತ್ತು ವಿನಾಯಿತಿಗಳಿಗೆ ಸಂಬಂಧಿಸಿದಂತೆ ನೀತಿ ರೂಪಿಸಲಾಗುತ್ತಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ತಿಳಿಸಿದ್ದಾರೆ.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಎರಡು ಇಲಾಖೆಗಳ ಅಧಿಕಾರಿಗಳ ಜತೆಗೆ ಬುಧವಾರ ಖನಿಜ ಭವನದಲ್ಲಿ ಸಭೆ ನಡೆಸಿದರು.
‘ಬಂಡವಾಳ ಆಕರ್ಷಣೆ ಮತ್ತು ಹೂಡಿಕೆ ಉತ್ತೇಜನಕ್ಕೆ ಪೂರಕವಾಗಿರುವಂತೆ ನೀತಿ ರೂಪಿಸುವ ಬಗ್ಗೆ ಒಂದು ವರದಿ ಸಿದ್ಧಪಡಿಸಿ ಎಂದು ಎರಡೂ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ, ಇಬ್ಬರು ಸಚಿವರೂ ಸೂಚಿಸಿದ್ದಾರೆ. ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಹೇಳಿದ್ದಾರೆ’ ಎಂದು ಪ್ರಕಟಣೆ ಹೇಳಿದೆ.
‘ಈ ವಲಯಗಳ ಉದ್ಯಮಕ್ಕೆ ಪೂರಕವಾಗಿ ನೀಡಬಹುದಾದ ರಿಯಾಯಿತಿಗಳ ಬಗ್ಗೆ ಮಾಹಿತಿ ತಂತ್ರಜ್ಞಾನ ಇಲಾಖೆಯು ಪರಿಶೀಲನೆ ನಡೆಸುತ್ತಿದ್ದು, ಕೈಗಾರಿಕಾ ಇಲಾಖೆಯಿಂದ ದೊರೆಯಬಹುದಾದ ವಿನಾಯಿತಿಗಳ ಬಗ್ಗೆ ಇಬ್ಬರು ಸಚಿವರು ಸಭೆಯಲ್ಲಿ ಚರ್ಚಿಸಿದರು. ಒಂದೇ ಕೈಗಾರಿಕೆಗೆ ಎರಡೂ ಇಲಾಖೆಗಳಿಂದ ರಿಯಾಯಿತಿ ದೊರೆಯುತ್ತಿದ್ದು, ಈ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಿಕೊಳ್ಳುವ ಅಗತ್ಯವಿದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು’ ಎಂದು ಪ್ರಕಟಣೆ ತಿಳಿಸಿದೆ.
‘ಉದ್ದೇಶಿತ ಡ್ರೋನ್ ಪರೀಕ್ಷಾ ಕೇಂದ್ರವನ್ನು ಬೆಂಗಳೂರಿನ ವ್ಯಾಪ್ತಿಯಲ್ಲಿ ಸ್ಥಾಪಿಸಲು ಸಾಧ್ಯವಿಲ್ಲ. ಹೆಸರಘಟ್ಟ ಪ್ರದೇಶವೂ ಬೆಂಗಳೂರಿನ ವ್ಯಾಪ್ತಿಯಲ್ಲಿ ಬರುವುದರಿಂದ, ಪರೀಕ್ಷಾ ಕೇಂದ್ರಕ್ಕೆ ಬೇರೆ ಸ್ಥಳ ಹುಡುಕಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು’ ಎಂದಿದೆ.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಅವರು ಸಭೆಯಲ್ಲಿ ಭಾಗಿಯಾಗಿದ್ದರು.
‘ನೀರು ಪೂರೈಕೆಗೆ ₹2500 ಕೋಟಿಯ ಯೋಜನೆ’
‘ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿರುವ ಪ್ರದೇಶಗಳಿಗೆ ನೀರು ಒದಗಿಸಲು ₹2500 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಕೈಗಾರಿಕೆಗಳಿಗೆ ನೀರಿನ ಭದ್ರತೆಯನ್ನು ಒದಗಿಸಬೇಕಿದೆ. ಇದಕ್ಕಾಗಿ ‘ಕೈಗಾರಿಕಾ ನೀರು ಭದ್ರತಾ ನೀತಿ’ಯನ್ನು ರೂಪಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ’ ಎಂದು ಎಂ.ಬಿ.ಪಾಟೀಲ ತಿಳಿಸಿದ್ದಾರೆ.
‘ನೀರು ಪೂರೈಕೆ ಯೋಜನೆ ಅಡಿಯಲ್ಲಿ ಉದ್ಯಮಗಳಿಗೆ ಅಗತ್ಯವಿರುವ ಶೇ 50ರಷ್ಟನ್ನು ಸರ್ಕಾರ ಪೂರೈಸಲಿದೆ. ನೀರಿನ ಸಂಸ್ಕರಣೆ ಮತ್ತು ಮರುಬಳಕೆ ಮೂಲಕ ಉಳಿದ ಶೇ 50ರಷ್ಟನ್ನು ಕೈಗಾರಿಕೆಗಳೇ ಒದಗಿಸಿಕೊಳ್ಳಬೇಕು. ಇದನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಾಗಿದೆ’ ಎಂದಿದ್ದಾರೆ.
‘ಪಿಸಿಬಿ ಪಾರ್ಕ್‌ಗೆ ಭೂಮಿ ನೀಡಿ’
‘ಮಾಹಿತಿ ತಂತ್ರಜ್ಞಾನ ಇಲಾಖೆಯ ವತಿಯಿಂದ ದೇವನಹಳ್ಳಿ ಸಮೀಪದ ಆದಿನಾರಾಯಣ ಹೊಸಹಳ್ಳಿ ಅಥವಾ ಐಟಿಐಆರ್ ಪ್ರದೇಶದಲ್ಲಿ 100 ಎಕರೆಯಲ್ಲಿ ಸ್ಪೇಸ್ ಪಾರ್ಕ್ ಮೈಸೂರಿನ ಕೋಚನಹಳ್ಳಿ ಹಂತ-2ರಲ್ಲಿ 150 ಎಕರೆಯಲ್ಲಿ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಪಾರ್ಕ್ ಸ್ಥಾಪಿಸಲು ತೀರ್ಮಾನಿಸಲಾಗಿದೆ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
‘ಅಡಕನಹಳ್ಳಿ ಮತ್ತು ಕೋಚನಹಳ್ಳಿ ಎರಡೂ ಕಡೆ ತಲಾ 100 ಎಕರೆಯಲ್ಲಿ ಗ್ಲೋಬಲ್ ಇನ್ನೋವೇಶನ್ ಸಿಟಿ 100 ಎಕರೆಯಲ್ಲಿ ಕಿಯೋನಿಕ್ಸ್ ಮೂಲಕ ʻಗ್ಲೋಬಲ್ ಕೇಪಬಿಲಿಟಿ ಸೆಂಟರ್ʼಗಳನ್ನು ಸ್ಥಾಪಿಸಲು ತೀರ್ಮಾನಿಸಿದೆ. ಇದಕ್ಕೆ ಜಮೀನು ಒದಗಿಸುವಂತೆ ಕೈಗಾರಿಕಾ ಸಚಿವರನ್ನು ಕೋರಲಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.