ADVERTISEMENT

ವರದಿ ಬಂದ 20 ದಿನಗಳಲ್ಲಿ ಒಳ ಮೀಸಲಾತಿ ಜಾರಿ: ಸಚಿವ ಎಚ್‌.ಸಿ. ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 15:59 IST
Last Updated 28 ಜುಲೈ 2025, 15:59 IST
<div class="paragraphs"><p>ಎಚ್‌.ಸಿ. ಮಹದೇವಪ್ಪ</p></div>

ಎಚ್‌.ಸಿ. ಮಹದೇವಪ್ಪ

   

ಬೆಂಗಳೂರು: ‘ಪರಿಶಿಷ್ಟ ಜಾತಿಯಲ್ಲಿ ಒಳ ಮಿಸಲಾತಿ ಕಲ್ಪಿಸುವ ಉದ್ದೇಶದಿಂದ ಸರ್ಕಾರಕ್ಕೆ ಶಿಫಾರಸು ಮಾಡಲು ರಚಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌‍ ನೇತೃತ್ವದ ಏಕ ಸದಸ್ಯ ಆಯೋಗ ವರದಿ ಸಲ್ಲಿಸಿದ 20 ದಿನಗಳಲ್ಲಿ ರಾಜ್ಯ ಸರ್ಕಾರವು ಒಳ ಮೀಸಲಾತಿ ಜಾರಿ ಮಾಡಲಿದೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಒಳ ಮೀಸಲಾತಿ ವಿಚಾರದಲ್ಲಿ ಬಿಜೆಪಿ ನಾಯಕರು ಜನರನ್ನು ದಾರಿ ತಪ್ಪಿಸುವ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಒಳ ಮೀಸಲಾತಿಗಾಗಿ 1992ರಲ್ಲಿ ಕಾಂಗ್ರೆಸ್‌‍ ಸರ್ಕಾರ ರಚಿಸಿದ್ದ ನ್ಯಾಯಾಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಸಲ್ಲಿಸಿತ್ತು. ಆದರೆ, ಬಿಜೆಪಿ ಸರ್ಕಾರ ಆ ವರದಿಯನ್ನು ತಿರಸ್ಕರಿಸಿ, ಮುಗಿದ ಅಧ್ಯಾಯ ಎಂದು ಹೇಳಿತ್ತು. ಒಳ ಮೀಸಲಾತಿ ಆಗ್ರಹಿಸಿ ಹೋರಾಟ ಮಾಡುವುದಾಗಿ ಈಗ ಹೇಳುತ್ತಿರುವ ಗೋವಿಂದ ಕಾರಜೋಳ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಎ. ನಾರಾಯಣ ಸ್ವಾಮಿ ಕೇಂದ್ರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. ಈ ಇಬ್ಬರ ಅಧಿಕಾರಾವಧಿಯಲ್ಲಿಯೇ ಸದಾಶಿವ ಅಯೋಗ ವರದಿ ತಿರಸ್ಕಾರ ಆಗಿತ್ತು’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಒಳ ಮೀಸಲಾತಿ ಜಾರಿಗೊಳಿಸಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆ ಬಳಿಕ ಸುಪ್ರೀಂ ಕೋರ್ಟ್‌ ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ತೀರ್ಪು ನೀಡಿದೆ. ಅದನ್ನು ಆಧರಿಸಿ ಎಂಫರಿಕಲ್‌ ದತ್ತಾಂಶ ಸಂಗ್ರಹಿಸಲು ಏಕಸದಸ್ಯ ಆಯೋಗ ರಚಿಸಿದ್ದೇವೆ. ಆಯೋಗ ವರದಿ ಸಲ್ಲಿಸಿದ 15ರಿಂದ 20 ದಿನಗಳ ಒಳಗೆ ಒಳ ಮೀಸಲಾತಿ ಜಾರಿ ಮಾಡುತ್ತೇವೆ’ ಎಂದರು.

‘ಚಿತ್ರದುರ್ಗದ ಸಮಾವೇಶದಲ್ಲೇ ಒಳ ಮೀಸಲಾತಿ ಜಾರಿಯ ಬದ್ಧತೆಯನ್ನು ಕಾಂಗ್ರೆಸ್‌‍ ಘೋಷಣೆ ಮಾಡಿದೆ. ಪಕ್ಷ ತನ್ನ ಮಾತಿಗೆ ಬದ್ಧವಾಗಿದೆ. ನಾವು ಒಳ ಮೀಸಲಾತಿ ಜಾರಿ ಮಾಡುವ ಹಂತದಲ್ಲಿರುವಾಗ, ರಾಜಕೀಯ ಕಾರಣಕ್ಕೆ ಬಿಜೆಪಿಯವರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮೀಸಲಾತಿ ವಿರುದ್ಧ ಇರುವವರಿಂದ ನಾವು ನೈತಿಕತೆಯ ಪಾಠ ಕಲಿಯಬೇಕಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.