ADVERTISEMENT

18–44: ಮುಂಚೂಣಿ ಕಾರ್ಯಕರ್ತರಿಗೆ ನಾಳೆಯಿಂದ ಲಸಿಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2021, 6:05 IST
Last Updated 21 ಮೇ 2021, 6:05 IST
   

ಬೆಂಗಳೂರು: ಕೋವಿಡ್ ಲಸಿಕೆಯ ಕೊರತೆ ಕಾರಣದಿಂದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ 18ರಿಂದ 44 ವರ್ಷದ ಫಲಾನುಭವಿಗಳಿಗೆ ಲಸಿಕೆ ವಿತರಣೆ ಸ್ಥಗಿತಗೊಳಿಸಿದ್ದ ಸರ್ಕಾರ, ಶನಿವಾರದಿಂದ (ಮೇ 22) ಗುರುತಿಸಲಾದ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲು ಮುಂದಾಗಿದೆ.

ಈ ಸಂಬಂಧ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿ ಮಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ರಾಜ್ಯ ಸರ್ಕಾರವು 2 ಕೋಟಿ ಡೋಸ್‌ ‘ಕೋವಿಶೀಲ್ಡ್‌’ ಲಸಿಕೆ ಖರೀದಿಗೆ ಸೀರಂ ಇನ್‌ಸ್ಟಿಟ್ಯೂಟ್‌ಗೆ ಕಾರ್ಯಾದೇಶ ನೀಡಿತ್ತು. ಆದರೆ, ಸಮರ್ಪಕವಾಗಿ ಪೂರೈಕೆಯಾಗದ ಕಾರಣ 18ರಿಂದ 44 ವರ್ಷದವರಿಗೆ ಲಸಿಕೆ ವಿತರಣೆ ಸ್ಥಗಿತ ಮಾಡಿ, ಲಸಿಕೆಯ ದಾಸ್ತಾನನ್ನು 45 ವರ್ಷ ಮೇಲ್ಪಟ್ಟವರಿಗೆ ಬಳಸಿಕೊಳ್ಳಲು ಸೂಚಿಸಿತ್ತು. ಆದರೆ, ಈಗ ಹಂತ ಹಂತವಾಗಿ ಲಸಿಕೆ ರಾಜ್ಯಕ್ಕೆ ಬರುತ್ತಿರುವ ಕಾರಣ ಸಾರಿಗೆ ಸಿಬ್ಬಂದಿ, ಅಂಚೆ ಇಲಾಖೆ ಸಿಬ್ಬಂದಿ ಒಳಗೊಂಡಂತೆ ಗುರುತಿಸಲಾದ ಮುಂಚೂಣಿ ಕಾರ್ಯಕರ್ತರಿಗೆ ವಿತರಣೆಯನ್ನು ಪುನಃ
ಪ್ರಾರಂಭಿಸಲಿದೆ.

ADVERTISEMENT

‘18ರಿಂದ 44 ವರ್ಷದ ಫಲಾನುಭವಿಗಳಿಗೆ ನೀಡಲು ಲಸಿಕೆಯನ್ನು ಸರ್ಕಾರವು ಖರೀದಿಸಿದ್ದು, ರಾಜ್ಯ ಮಟ್ಟದ ಕಾರ್ಯಪಡೆಯಲ್ಲಿ ಗುರುತಿಸಲಾದ ಸಮೂಹಗಳಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಲು ಸೂಚಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆದ್ಯತೆ ಗುಂಪುಗಳನ್ನು ಗುರುತಿಸಲಾಗಿದೆ. ಮೊದಲು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಬಳಿಕ ಆದ್ಯತೆ ಗುಂಪುಗಳಿಗೆ ಒದಗಿಸಲಾಗುತ್ತದೆ’ ಎಂದು ಅಭಿಯಾನದ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಅಂಗವಿಕಲರು, ಬೀದಿ ಬದಿ ವ್ಯಾಪಾರಿಗಳು, ಸಾರಿಗೆ ಸಿಬ್ಬಂದಿ, ಆಟೋ ರಿಕ್ಷಾ ಮತ್ತು ಕ್ಯಾಬ್ ಚಾಲಕರು, ಔಷಧ ತಯಾರಿಸುವ ಕಂಪನಿ ಸಿಬ್ಬಂದಿ, ಚಿತಾಗಾರ–ಸ್ಮಶಾನದಲ್ಲಿ ಕೆಲಸ ಮಾಡುವ ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು, ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೆಲಸಗಾರರು ಸೇರಿಂದಂತೆ ಒಟ್ಟು 22 ವಿಭಾಗದಲ್ಲಿ ಮುಂಚೂಣಿ ಕಾರ್ಯಕರ್ತರನ್ನು ಗುರುತಿಸಲಾಗಿದೆ.

ಆದ್ಯತೆ ಗುಂಪಿನಲ್ಲಿ ಕಟ್ಟಡ ಕಾರ್ಮಿಕರು, ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ, ರೈಲ್ವೆ ಸಿಬ್ಬಂದಿ, ಕೆ.ಎಂ.ಎಫ್ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ಹೋಟೆಲ್ ಮತ್ತು ಆತಿಥ್ಯ ಸೇವಾದಾರರು ಪೆಟ್ರೋಲ್ ಬಂಕ್ ಕೆಲಸಗಾರರು ಸೇರಿದಂತೆ 18 ವಿಭಾಗಗಳಲ್ಲಿ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.