ಬೆಂಗಳೂರು: ವಿಧಾನಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ಆರತಿ ಕೃಷ್ಣ, ರಮೇಶ್ ಬಾಬು, ದಿನೇಶ್ ಅಮೀನ್‌ಮಟ್ಟು, ಡಿ.ಜಿ. ಸಾಗರ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ರಾಜಭವನಕ್ಕೆ ಕಳುಹಿಸಲಾಗಿದೆ.
ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್, ಪ್ರಕಾಶ್ ಕೆ. ರಾಥೋಡ್ ಅವರ ಅವಧಿ ಅಕ್ಟೋಬರ್ 2024ಕ್ಕೆ, ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಅವರ ಅವಧಿ ಜನವರಿ 2025ಕ್ಕೆ ಮುಕ್ತಾಯವಾಗಿತ್ತು. ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸಲು ಸಿ.ಪಿ. ಯೋಗೇಶ್ವರ್ ರಾಜೀನಾಮೆ ನೀಡಿದ್ದರಿಂದ ಅವರ ಸ್ಥಾನವೂ ತೆರವಾಗಿತ್ತು.
ಖಾಲಿ ಇದ್ದ ನಾಲ್ಕು ನಾಮನಿರ್ದೇಶನ ಸ್ಥಾನಗಳಿಗೆ 20ಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದರು. ಎಐಸಿಸಿ ಸಮ್ಮತಿ ದೊರೆತ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ವರ ಹೆಸರನ್ನು ಅಂತಿಮಗೊಳಿಸಿದ್ದರು.
ಆರತಿ ಕೃಷ್ಣ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆಯಾಗಿದ್ದಾರೆ. ರಮೇಶ್ ಬಾಬು ಪ್ರಸ್ತುತ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರು. ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಸಿದ್ದರಾಮಯ್ಯ ಅವರಿಗೆ 2013–18ರವರೆಗೆ ಮಾಧ್ಯಮ ಸಲಹೆಗಾರರಾಗಿದ್ದರು. ಡಿ.ಜಿ. ಸಾಗರ್ ದಲಿತ ಸಂಘರ್ಷ ಸಮಿತಿಯ ನಾಯಕರಲ್ಲಿ ಒಬ್ಬರು.
ನಾಲ್ವರ ನೇಮಕದೊಂದಿಗೆ ಕಾಂಗ್ರೆಸ್ ಸಂಖ್ಯಾಬಲ 37ಕ್ಕೆ ಏರಿಕೆಯಾಗಲಿದ್ದು, ವಿಧಾನಪರಿಷತ್‌ನಲ್ಲಿ ಬಹುಮತ ಹೊಂದಲಿದೆ. ಸಭಾಪತಿ ಸೇರಿಯೂ ಬಿಜೆಪಿ 30, ಜೆಡಿಎಸ್ 7 ಸದಸ್ಯರ ಬಲ ಹೊಂದಿವೆ. ಲಖನ್ ಜಾರಕಿಹೊಳಿ ಪಕ್ಷೇತರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.