ADVERTISEMENT

ಉಪಸಭಾಪತಿ ಚುನಾವಣೆ: ಪ್ರಾಣೇಶ್, ಅರಳಿ ನಾಮಪತ್ರ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2022, 21:45 IST
Last Updated 22 ಡಿಸೆಂಬರ್ 2022, 21:45 IST
   

ಬೆಳಗಾವಿ: ವಿಧಾನಪರಿಷತ್‌ ಉಪಸಭಾಪತಿ ಸ್ಥಾನಕ್ಕೆ ಬಿಜೆಪಿ ಸದಸ್ಯ ಎಂ.ಕೆ. ಪ್ರಾಣೇಶ್ ಮತ್ತು ಕಾಂಗ್ರೆಸ್ ಸದಸ್ಯ ಅರವಿಂದ ಅರಳಿ ಗುರುವಾರ ನಾಮಪತ್ರ ಸಲ್ಲಿಸಿದರು.ಶುಕ್ರವಾರ ಉಪ ಸಭಾಪತಿ ಚುನಾವಣೆ ನಡೆಯಲಿದೆ.

ಪರಿಷತ್‌ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಅವರಿಗೆ ನಾಮಪತ್ರ ಸಲ್ಲಿಸಿದರು. ಸದನದಲ್ಲಿ ಬಿಜೆಪಿ 39, ಕಾಂಗ್ರೆಸ್‌ 26, ಜೆಡಿಎಸ್‌ 8 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ.

ಪ್ರಾಣೇಶ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭಾಶಯ ಕೋರಿದರು. ಸಚಿವರಾದ ಆರ್. ಅಶೋಕ, ಗೋವಿಂದ ‌ಕಾರಜೋಳ, ಮಾಧುಸ್ವಾಮಿ, ಎಸ್.‌ಟಿ. ಸೋಮಶೇಖರ್, ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಹನುಮಂತ ನಿರಾಣಿ, ಛಲವಾದಿ ನಾರಾಯಣಸ್ವಾಮಿ ಹಾಜರಿದ್ದರು.

ADVERTISEMENT

ಸಂಪ್ರದಾಯ ಪಾಲಿಸಬೇಕಿತ್ತು: 'ಸಂಪ್ರದಾಯದ ಪ್ರಕಾರ ಉಪಸಭಾಪತಿ ಸ್ಥಾನವನ್ನು ಎರಡನೇ ಅತಿ ದೊಡ್ಡ ಪಕ್ಷಕ್ಕೆ ಕೊಡಬೇಕಿತ್ತು' ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.

‘ಲೋಕಸಭೆಯಲ್ಲಿ ಮಲ್ಲಿಕಾರ್ಜುನಯ್ಯ ಅವರನ್ನು ಕಾಂಗ್ರೆಸ್‌ ಪಕ್ಷವು ಉಪ ಸ್ಪೀಕರ್ ಮಾಡಿತ್ತು. ಆದರೆ, ಬಿಜೆಪಿ ಎಲ್ಲ ಸಂಪದ್ರಾಯವನ್ನು ಗಾಳಿಗೆ ತೂರಿದೆ. ಉಪಸಭಾಪತಿ ಸ್ಥಾನಕ್ಕೆ ಮಹಿಳೆಯನ್ನು ಕಣಕ್ಕಿಳಿಸಿದರೆ ಯಾವುದೇ ಅಭ್ಯರ್ಥಿ ಹಾಕದಂತೆ ನಮ್ಮ ಹೈಕಮಾಂಡ್ ಸೂಚಿಸಿತ್ತು. ಆದರೆ, ಬಿಜೆಪಿ ಮಹಿಳೆ ಹಾಗೂ ಕೆಳವರ್ಗದವರನ್ನು ಪರಿಗಣಿಸಲಿಲ್ಲ. ಹೀಗಾಗಿ, ನಾವು ಅರಳಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ' ಎಂದರು.

ಸಿ.ಟಿ. ರವಿ ಹೇಳಿಕೆಗೆ ಕಿಡಿ: ಕಾಂಗ್ರೆಸ್‌ ನಾಯಕರ ವಿರುದ್ಧ ಸಿ.ಟಿ. ರವಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿ.ಕೆ. ಹರಿಪ್ರಸಾದ್‌ ಅವರು, ‘ಸಿ.ಟಿ. ರವಿ ಮಾಧ್ಯಮದ ಮುಂದೆ ಬರುವಾಗ ಹೆಂಡ ಕುಡಿದು ಬರುತ್ತಾರೆ’ ಎಂದು ಕಿಡಿಕಾರಿದರು.

'ಸದನ ಪ್ರಾರಂಭ ಆಗುವಾಗ ಮತ್ತಷ್ಟು ಪಂಚ್ ಬೇಕು ಅಂತ ಗಾಂಜಾ ಸೇದಿ ಬರುತ್ತಾರೆ' ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್‌ ನಿಲುವು ನಿಗೂಢ: ಉಪಸಭಾಪತಿ ಚುನಾವಣೆಯಲ್ಲಿ ಜೆಡಿಎಸ್ ನಡೆ ಇನ್ನೂ ನಿಗೂಢವಾಗಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.