ADVERTISEMENT

ಹಣಕ್ಕಾಗಿ ದೇವದಾಸಿ ಪದ್ಧತಿಗೆ ಕುಮ್ಮಕ್ಕು!

ನಿರ್ದಾಕ್ಷಿಣ್ಯ ಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 0:30 IST
Last Updated 13 ಡಿಸೆಂಬರ್ 2024, 0:30 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಸುವರ್ಣ ವಿಧಾನಸೌಧ (ಬೆಳಗಾವಿ): ‘ಹಣ ಗಳಿಕೆಗಾಗಿ ಕೆಲವರು ದೇವದಾಸಿ ಪದ್ಧತಿಯ ಆಚರಣೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಅಂಥವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕಿ ಎಂ. ರೂಪಕಲಾ ಅಧ್ಯಕ್ಷತೆಯ ಕರ್ನಾಟಕ ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ.

ADVERTISEMENT

‘ದೇವದಾಸಿ ಪದ್ಧತಿ ಅನುಸರಿಸುವುದು, ಆಚರಿಸುವುದು ಅಪರಾಧ. ಆದರೆ, ಕೆಲವರು ಹಣಕ್ಕಾಗಿ ಈ ಪದ್ಧತಿ ಮುಂದುವರಿಸಲು ಕುಮ್ಮಕ್ಕು ನೀಡುತ್ತಿದ್ದಾರೆ. ಈ ಕುರಿತು ದೇವದಾಸಿಯರು ಮತ್ತು ಅವರ ಕುಟುಂಬದ ಸದಸ್ಯರ ಜತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮುಕ್ತ ಸಮಾಲೋಚನೆ ನಡೆಸಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ದೇವದಾಸಿ ಪದ್ಧತಿಗೆ ಸಂಪೂರ್ಣ ಕಡಿವಾಣ ಹಾಕಬೇಕು’ ಎಂದು ಸಮಿತಿಯ ಸದಸ್ಯ ಶರಣಗೌಡ ಬಯ್ಯಾಪುರ ವಿಧಾನ ಪರಿಷತ್‌ನಲ್ಲಿ ಗುರುವಾರ ಮಂಡಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಗರ ಪ್ರದೇಶಗಳಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿನ ಸಹಾಯಕಿಯರ ಹುದ್ದೆಗೆ ಸ್ಥಳೀಯರನ್ನೇ ನೇಮಿಸಿಕೊಳ್ಳುವ ಕುರಿತು ನಿಯಮ ರೂಪಿಸಬೇಕು. ಒಂದು ವೇಳೆ ಸ್ಥಳೀಯರು ಲಭ್ಯವಿಲ್ಲದೇ ಇದ್ದಾಗ ಮಾತ್ರ ಬೇರೆಯವರಿಗೆ ಆದ್ಯತೆ ನೀಡಬೇಕು. ದಾನಿಗಳ ನೆರವಿನಿಂದ ಅಂಗನವಾಡಿ ಕಟ್ಟಡ ಕಟ್ಟಿದ್ದರೆ, ಅಂತಹ ಕಟ್ಟಡಗಳ ಮೇಲೆ ಕಡ್ಡಾಯವಾಗಿ ದಾನಿಗಳ ಹೆಸರು ಬರೆಯಿಸಬೇಕು ಎಂದು ಸಲಹೆ ನೀಡಿದೆ.

ಬುದ್ಧಿಮಾಂದ್ಯ ಮಕ್ಕಳ ಆರೈಕೆಗಾಗಿ ಪೋಷಕರಿಗೆ ನೀಡುತ್ತಿರುವ ವಿಮಾ ಯೋಜನೆಯ ಹಣವನ್ನು ಹೆಚ್ಚಿಸಬೇಕು. ಹಗಲು ಯೋಗಕ್ಷೇಮ ಕೇಂದ್ರಗಳನ್ನು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲೂ ತೆರೆಯಬೇಕು. ಅಂಗವಿಕಲರಿಗೆ ಕ್ರೀಡೆ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ನೀಡುತ್ತಿರುವ ಪ್ರೋತ್ಸಾಹ ಧನ ಹಾಗೂ ಉದ್ಯೋಗಿನಿ ಯೋಜನೆ ಅಡಿ ಮಹಿಳೆಯರಿಗೆ ನೀಡುತ್ತಿರುವ ಸಾಲದ ಪ್ರಮಾಣ ಹೆಚ್ಚಳ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.