ADVERTISEMENT

Karnataka Rains: ಕುಣಿದು ಕುಪ್ಪಳಿಸಿದ ಜನ; ಇಂದು ಮಳೆ-ಬಿಸಿ ಗಾಳಿ ಸಾಧ್ಯತೆ

ಚಾಮರಾಜನಗರ: ಕಡಿಮೆಯಾದ ಕಾಳ್ಗಿಚ್ಚಿನ ಆತಂಕ * ಮೈಸೂರು ಭಾಗದಲ್ಲಿ ಆಲಿಕಲ್ಲು, ಬಿರುಗಾಳಿ ಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 4 ಮೇ 2024, 0:10 IST
Last Updated 4 ಮೇ 2024, 0:10 IST
<div class="paragraphs"><p>ಮೈಸೂರಿನ ಮೊದಲನೆಯ ಮಳೆ : ಮಳೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಆದಿಚುಂಚನಗಿರಿ ರಸ್ತೆಯಲ್ಲಿ ಸಾಗಿದ ರೀತಿ. </p></div>

ಮೈಸೂರಿನ ಮೊದಲನೆಯ ಮಳೆ : ಮಳೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಆದಿಚುಂಚನಗಿರಿ ರಸ್ತೆಯಲ್ಲಿ ಸಾಗಿದ ರೀತಿ.

   

–ಪ್ರಜಾವಾಣಿ ಚಿತ್ರ/ಅನೂಪ್‌ ರಾಘ.ಟಿ.

ಬೆಂಗಳೂರು/ಮೈಸೂರು: ಬೆಂಗಳೂರು ನಗರದಲ್ಲಿ ಮತ್ತು ಮೈಸೂರು ಭಾಗದ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಜೋರು ಮಳೆಯಾಯಿತು.

ADVERTISEMENT

ಬೆಂಗಳೂರು ನಗರದ ಹಲವೆಡೆ ಮಧ್ಯಾಹ್ನ 2.30ರಿಂದ 3ಗಂಟೆಯವರೆಗೆ ಬಿರುಸಿನ ಮಳೆಯಾಯಿತು. ನಾಯಂಡಹಳ್ಳಿ ಮತ್ತು ರಾಜರಾಜೇಶ್ವರಿ ನಗರದಲ್ಲಿ ಹೆಚ್ಚು ಮಳೆಯಾದ ವರದಿಯಾಗಿದೆ.

ಮಾರುತಿ ಮಂದಿರ ವಾರ್ಡ್‌, ಹಂಪಿನಗರ, ಕೆಂಗೇರಿ, ವಿದ್ಯಾಪೀಠ, ಬಿಳೇಕಹಳ್ಳಿಯಲ್ಲಿ 20 ಮಿ.ಮೀಗೂ ಹೆಚ್ಚು ಮಳೆಯಾಗಿದೆ. ಕಮ್ಮನಹಳ್ಳಿ, ರಾಮಮೂರ್ತಿ ನಗರ, ಹೊರಮಾವು, ಕೊಟ್ಟಿಗೆ ಪಾಳ್ಯ, ಹೆಮ್ಮಿಗೆ ಪುರ, ಚಾಮರಾಜಪೇಟೆ, ಅರೆಕೆರೆ, ಬಿಟಿಎಂ ಲೇಔಟ್, ಕಾಟನ್‌ಪೇಟೆ, ಕೋರಮಂಗಲ, ಉತ್ತರ ಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ.

ಮೈಸೂರು ನಗರ ಸೇರಿ ಜಿಲ್ಲೆಯ ವಿವಿಧೆಡೆ ಸಂಜೆ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಯಿತು. ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಜನ, ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲೇ ಕುಣಿದರು. ಮಣ್ಣಿನ ಸುವಾಸನೆಗೆ ಸಂತಸಪಟ್ಟರು. ಫೊಟೋ, ವಿಡಿಯೋ ಕ್ಲಿಕ್ಕಿಸಿ ಸಂಭ್ರಮ ಹಂಚಿಕೊಂಡರು. ಜಿಲ್ಲೆಯ ಬಿಳಿಕೆರೆ, ಕೆ.ಆರ್‌.ನಗರ, ಧರ್ಮಾಪುರ, ಪಿರಿಯಾಪಟ್ಟಣ, ಹುಣಸೂರು, ತಿ.ನರಸೀಪುರ, ನಂಜನಗೂಡು, ಬೆಟ್ಟದಪುರದಲ್ಲಿ ಮಳೆ ತಂಪೆರೆಯಿತು.

ಎಂದಿನಂತೆ ಬೆಳಿಗ್ಗೆಯಿಂದಲೇ  ಬಿಸಿಲಿನ ತಾಪ ಹೆಚ್ಚಿತ್ತು. ಆದರೆ ಸಂಜೆ 4.30ರ ಸಮಯದಲ್ಲಿ ನಗರದೆಲ್ಲೆಡೆ ದಟ್ಟ ಮೋಡಗಳು ಕವಿದು ಕತ್ತಲಿನ ವಾತಾವರಣ ಕಾಣಿಸಿತು. ದಿಢೀರನೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಯಿತು.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮ, ಕಾವೇರಿ ವನ್ಯಧಾಮ, ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳು, ಚಾಮರಾಜನಗರ, ಯಳಂದೂರು ತಾಲ್ಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಮಳೆಯಾಗಿದ್ದು, ಕಾಳ್ಗಿಚ್ಚಿನ ಆತಂಕ ಕೊಂಚ ಕಡಿಮೆಯಾಗಿದೆ. 

ಚಾಮರಾಜನಗರ, ಹನೂರು, ಗುಂಡ್ಲುಪೇಟೆ ತಾಲ್ಲೂಕಿನ ವಿವಿಧೆಡೆ ಅರ್ಧಗಂಟೆಗೂ ಹೆಚ್ಚು ಕಾಲ ಹಾಗೂ ಕೊಳ್ಳೇಗಾಲದಲ್ಲಿ 10 ನಿಮಿಷ ಮಳೆಯಾಯಿತು. 

ಮಂಡ್ಯ ಜಿಲ್ಲೆಯ ಮಂಡ್ಯ, ಮಳವಳ್ಳಿ, ಮದ್ದೂರು, ಕೆ.ಆರ್.ಪೇಟೆ, ನಾಗಮಂಗಲ, ಶ್ರೀರಂಗಪಟ್ಟಣ, ಪಾಂಡವಪುರದಲ್ಲಿ, ಕೊಡಗು ಜಿಲ್ಲೆಯ ಮಡಿಕೇರಿ, ಕುಶಾಲನಗರ, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಬಿರುಗಾಳಿ, ಗುಡುಗು, ಸಿಡಿಲಿನ ಮಳೆ ಸುರಿಯಿತು. ನಾಪೋಕ್ಲು ವ್ಯಾಪ್ತಿಯಲ್ಲಿ ಬಿರುಗಾಳಿ ಬೀಸಿತು. ಗೋಣಿಕೊಪ್ಪಲು, ಪೊನ್ನಂಪೇಟೆ, ಬೇಗೂರು, ಬಿ. ಶೆಟ್ಟಿಗೆರಿ, ಕುಂದ ಭಾಗಕ್ಕೆ ವರ್ಷದ ಮೊದಲ ಮಳೆ ಸುರಿಯಿತು. ವಿರಾಜಪೇಟೆ, ಸಿದ್ದಾಪುರ ಭಾಗದಲ್ಲೂ ಮಳೆ ಸುರಿದಿದೆ. ಹಾಸನ ಜಿಲ್ಲೆಯ ಅರಕಲಗೂಡು, ಹಳೇಬೀಡಿನಲ್ಲಿ ತುಂತುರು ಮಳೆಯಾಯಿತು.

ಸಿಡಿಲು ಬಡಿದು ಮಹಿಳೆ ಸಾವು (ಹೊಸಕೋಟೆ ವರದಿ): ತಾಲ್ಲೂಕಿನ ಗಣಗಲು ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಮಧ್ಯಾಹ್ನ ದಿಢೀರ್‌ ಸುರಿದ ಮಳೆಯಿಂದ ಆಶ್ರಯ ಪಡೆಯಲು ತೋಟದ ಬಳಿ ಬೇವಿನ ಮರದಡಿ ರತ್ನಮ್ಮ(62) ಮೇಕೆಗಳ ಜತೆ ನಿಂತಿದ್ದಾಗ ಸಿಡಿಲು ಬಡಿದಿದೆ. 

ರಾಮನಗರ ವರದಿ: ಜಿಲ್ಲೆಯ ವಿವಿಧೆಡೆ ಭಾರಿ ಗಾಳಿ ಹಾಗೂ ಸಿಡಿಲಿನೊಂದಿಗೆ ರಾಮನಗರ, ಚನ್ನಪಟ್ಟಣ, ಹಾರೋಹಳ್ಳಿ, ಮಾಗಡಿ ಹಾಗೂ ಕನಕಪುರ ತಾಲ್ಲೂಕಿನಲ್ಲಿ ಮಳೆಯಾಗಿದೆ. ರಾಮನಗರ ಹೊರವಲಯದ ಜಾನಪದ ಲೋಕದಲ್ಲಿರುವ ಗಿರಿಜನ ಲೋಕದ ಮಲೆ ಕುಡಿಯರ ಗುಡಿಸಿಲಿಗೆ ಸಿಡಿಲು ಬಡಿದಿದ್ದರಿಂದ ಹೊತ್ತಿ ಉರಿದಿದೆ.

ಕೋಲಾರ ವರದಿ: ಕೋಲಾರ, ಮಾಲೂರು, ಬಂಗಾರಪೇಟೆ, ಬೇತಮಂಗಲ, ಶ್ರೀನಿವಾಸಪುರದ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಬಿರುಗಾಳಿ ಸಮೇತ ಮಳೆಯಾಯಿತು.

ಮೈಸೂರಿನ ಮೊದಲನೆಯ ಮಳೆ : ಮಳೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲಿ ಸಾಗಿದ ರೀತಿ. –ಪ್ರಜಾವಾಣಿ ಚಿತ್ರ/ಅನೂಪ್‌ ರಾಘ.ಟಿ.

ರಾಜಧಾನಿಯಲ್ಲೂ ಬಿರುಸಾಗಿ ಸುರಿದ ಮಳೆ  ಹಲವೆಡೆ ಗುಡುಗು –ಸಿಡಿಲಿನ ಅಬ್ಬರ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉತ್ತಮ ಮಳೆ  

ಇಂದು ಮಳೆ, ಬಿಸಿ ಗಾಳಿ ಸಾಧ್ಯತೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರವೂ ಬಿಸಿ ಗಾಳಿ ಕಾಣಿಸಿಕೊಳ್ಳುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಬೆಂಗಳೂರು ಸೇರಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.  ಕೊಡಗು ಮೈಸೂರು ಮಂಡ್ಯ ರಾಮನಗರ ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಜತೆಗೆ ಹಲವೆಡೆ ಬಿಸಿ ಗಾಳಿಯೂ ಕಾಣಿಸಿಕೊಳ್ಳುವ ಸಂಭವವಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.  ಬೀದರ್ ಬೆಳಗಾವಿ ಧಾರವಾಡ ಗದಗ ಕಲಬುರಗಿ ಹಾವೇರಿ ಕೊಪ್ಪಳ ರಾಯಚೂರು ಯಾದಗಿರಿ ಚಾಮರಾಜನಗರ ಚಿಕ್ಕಬಳ್ಳಾಪುರ ಚಿತ್ರದುರ್ಗ ದಾವಣಗೆರೆ ತುಮಕೂರು ಬಳ್ಳಾರಿ ಬೆಂಗಳೂರು ನಗರ ಮಂಡ್ಯ ಮತ್ತು ಮೈಸೂರು ಜಿಲ್ಲೆಯಲ್ಲಿ ಶಾಖದ ಅಲೆಯಿಂದ ಕೂಡಿದ ವಾತಾವರಣವು ಶನಿವಾರವೂ ಹೆಚ್ಚಾಗಿರುತ್ತದೆ ಎಂದು ಹೇಳಿದೆ.  ಇದೇ 6ರವರೆಗೂ ಒಣಹವೆ ಇರಲಿದ್ದು 7ರಿಂದ ದಕ್ಷಿಣ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. 9ರಿಂದ ಕರಾವಳಿ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಹಗುರ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ.  ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಪ್ರಕಾರ ಉಡುಪಿ ದಕ್ಷಿಣ ಹಾಗೂ ಕೊಡಗು ಬಿಟ್ಟು ಉಳಿದ ಜಿಲ್ಲೆಗಳಲ್ಲಿ ಶುಕ್ರವಾರ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ರಾಯಚೂರಿನಲ್ಲಿ 46.4 ಡಿಗ್ರಿ ಸೆಲ್ಸಿಯಸ್ ಹಾಗೂ ಕಲಬುರಗಿಯಲ್ಲಿ 45.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ವರದಿಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.