ಸುವರ್ಣ ವಿಧಾನಸೌಧ (ಬೆಳಗಾವಿ): ಪಂಚಾಯತ್ ರಾಜ್ ಆಯುಕ್ತರ ಅಧ್ಯಕ್ಷತೆಯ ಸಮಿತಿ ವರದಿ ನೀಡಿದ ತಕ್ಷಣ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಯ ಸೇವಾ ವಿಷಯಗಳ ಬೇಡಿಕೆ ಈಡೇರಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬಿಜೆಪಿಯ ಎನ್. ರವಿಕುಮಾರ್, ಡಿ.ಎಸ್. ಅರುಣ್, ಚಿದಾನಂದಗೌಡ, ಧನಂಜಯ ಸರ್ಜಿ, ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಕೇಳಿದ ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಮಿತಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರಿಗೆ ಕೇರಳ ಮಾದರಿಯಲ್ಲಿ ಮಾಸಿಕ ಗೌರವಧನ ನೀಡಲು ಸಾಧ್ಯವಿಲ್ಲ. ಅಲ್ಲಿ 942 ಪಂಚಾಯಿತಿಗಳು ಇದ್ದರೆ ರಾಜ್ಯದಲ್ಲಿ 5,950 ಇವೆ. 95 ಸಾವಿರಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳು ಇದ್ದಾರೆ. ಹಾಗಾಗಿ, ಎರಡೂ ರಾಜ್ಯಗಳ ಹೋಲಿಕೆ ಸಾಧ್ಯವಿಲ್ಲ ಎಂದು ಹೇಳಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜ್ಯೇಷ್ಠತಾ ಪಟ್ಟಿ ವಿವಾದ ಕೋರ್ಟ್‌ನಲ್ಲಿದೆ. ತೀರ್ಪು ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯಿತಿಗಳಿಗೆ ಇಲಾಖಾ ಯೋಜನೆಗಳ ಅನುಷ್ಠಾನ ಜವಾಬ್ದಾರಿ ನೀಡುವ ಪ್ರಕ್ರಿಯೆಗೆ ವೇಗ ನೀಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ನಿರ್ಧರಣೆಗೆ ಒಳಪಟ್ಟ ಎಲ್ಲ ಭೂಮಿ ಮತ್ತು ಕಟ್ಟಡಗಳ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಪತ್ತೆ ಮಾಡಿದ 1.41 ಕೋಟಿ ಆಸ್ತಿಯನ್ನು ಪಂಚತಂತ್ರದಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.