ಬೆಂಗಳೂರು: ‘ಕರ್ನಾಟಕದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯಕ್ಕೆ ಶೀಘ್ರವೇ ಭೇಟಿ ನೀಡಿ, ಪರಿಶೀಲನೆ ನಡೆಸಿ’ ಎಂದು ರಾಜ್ಯ ಬಿಜೆಪಿ ಘಟಕದ ಮಹಿಳಾ ಮೋರ್ಚಾವು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
ಮಹಿಳಾ ಮೋರ್ಚಾದ ಅಧ್ಯಕ್ಷೆ ಸಿ.ಮಂಜುಳಾ ನೇತೃತ್ವದ ನಿಯೋಗವು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯ ಕಿಶೋರ್ ರಾಹತ್ಕರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದೆ. ವರ್ಷದ ಅವಧಿಯಲ್ಲಿ ರಾಜ್ಯಾದಾದ್ಯಂತ ಮಹಿಳೆಯರ ವಿರುದ್ಧ ನಡೆದಿರುವ ವಿವಿಧ 18 ಅಪರಾಧ ಕೃತ್ಯಗಳನ್ನು ಪಟ್ಟಿ ಮಾಡಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿವರಿಸಿದೆ.
‘ಬೆಂಗಳೂರು ನಗರದಲ್ಲಿ ಈಚೆಗೆ ಹಿಂದೂ ಯುವತಿಯ ಶವವು ಕಸ ಬಿಸಾಡುವ ಜಾಗದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಗೃಹ ಸಚಿವರು, ಇಂಥದ್ದೆಲ್ಲಾ ಮಾಮೂಲು ಎಂದಿದ್ದಾರೆ. ಮಹಿಳೆಯರ ಬಗ್ಗೆ ಈ ಸರ್ಕಾರಕ್ಕೆ ಇರುವ ಕಾಳಜಿ ಎಂಥದ್ದು ಎಂಬುದನ್ನು ಗೃಹಸಚಿವರ ಮಾತೇ ಸಾಬೀತು ಮಾಡುತ್ತದೆ’ ಎಂದು ಮಂಜುಳಾ ಅವರು ಮನವಿ ಪತ್ರದಲ್ಲಿ ದೂರಿದ್ದಾರೆ.
‘ಮೈಸೂರು ದಸರಾ ವಸ್ತು ಪ್ರದರ್ಶನದ ಮೈದಾನದಲ್ಲಿ ಬಲೂನು ಮಾರುತ್ತಿದ್ದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ, ಹಾವೇರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಮಲೆನಾಡಿನ ಜಿಲ್ಲೆಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು, ಧಾರವಾಡದಲ್ಲಿ ನೇಹಾ ಹಿರೇಮಠ್ ಕೊಲೆ ಪ್ರಕರಣಗಳು ರಾಜ್ಯ ಸರ್ಕಾರಕ್ಕೆ ಆಡಳಿತದ ಮೇಲೆ ಹಿಡಿತವೇ ಇಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ಆರೋಪಿಸಿದ್ದಾರೆ.
‘ರಾಜ್ಯ ಸರ್ಕಾರದ ಮೇಲೆ ಮಹಿಳೆಯರಿಗೆ ನಂಬಿಕೆ ಇಲ್ಲದಂತಾಗಿದೆ. ತಾವು ತಕ್ಷಣವೇ ರಾಜ್ಯಕ್ಕೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಬೇಕು. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಕೋರಿದ್ದಾರೆ.
‘ಶಕ್ತಿ ಯೋಜನೆ ವಿಫಲ’
‘ರಾಜ್ಯ ಸರ್ಕಾರವು ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ‘ಶಕ್ತಿ’ ಯೋಜನೆಯನ್ನು ಘೋಷಿಸಿದೆ. ಆದರೆ ಓಡಾಟಕ್ಕೆ ತುಕ್ಕುಹಿಡಿದ ಸುಸ್ಥಿತಿಯಲ್ಲಿ ಇರದ ಬಸ್‌ಗಳನ್ನು ನೀಡಿದೆ. ಹೀಗಾಗಿ ಈ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಬಿಜೆಪಿ ಮಹಿಳಾ ಮೋರ್ಚಾವು ಮನವಿಯಲ್ಲಿ ಟೀಕಿಸಿದೆ. ‘ಈ ಮೊದಲು ಸಂಚರಿಸುತ್ತಿದ್ದ ಬಸ್‌ಗಳಿಗಿಂತ ಕಡಿಮೆ ಸಂಖ್ಯೆಯ ಬಸ್‌ಗಳನ್ನು ಕಾರ್ಯಾಚರಣೆಗೆ ಬಿಡಲಾಗಿದೆ. ಕೆಟ್ಟ ಸ್ಥಿತಿಯಲ್ಲಿರುವ ಬಸ್‌ಗಳ ಕಾರಣಕ್ಕೆ ಅಪಘಾತವಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ’ ಎಂದು ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.