ADVERTISEMENT

ರೈತ ಹೋರಾಟಕ್ಕೆ ಕರ್ನಾಟಕದಿಂದಲೂ ಬೆಂಬಲ: ರಾಜ್ಯದ ರೈತರಿಗಾಗಿಯೇ ಪ್ರತ್ಯೇಕ ಟೆಂಟ್

ದೆಹಲಿ ಗಡಿಯಲ್ಲಿ ರೈತ ಹುತಾತ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 18:10 IST
Last Updated 21 ಜುಲೈ 2021, 18:10 IST
ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಬಳಿಯ ಗಾಜಿಪುರ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಬುಧವಾರ ರೈತ ಹುತಾತ್ಮ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ವಿದ್ಯುತ್‌ ಖಾಸಗೀಕರಣ ಮಸೂದೆ ವಿರೋಧಿಸುವ ಭಿತ್ತಿಪತ್ರ ಪ್ರದರ್ಶಿಸಲಾಯಿತು
ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಬಳಿಯ ಗಾಜಿಪುರ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಬುಧವಾರ ರೈತ ಹುತಾತ್ಮ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ವಿದ್ಯುತ್‌ ಖಾಸಗೀಕರಣ ಮಸೂದೆ ವಿರೋಧಿಸುವ ಭಿತ್ತಿಪತ್ರ ಪ್ರದರ್ಶಿಸಲಾಯಿತು   

ನವದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆ ವಿರೋಧಿಸಿ ಎಂಟು ತಿಂಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕರ್ನಾಟಕದ ರೈತರೂ ಕೈಜೋಡಿಸಿದ್ದಾರೆ. ಇಲ್ಲಿನ ಗಾಜಿಪುರ ಗಡಿಯಲ್ಲಿ ಕರ್ನಾಟಕದ ರೈತರಿಗಾಗಿ ಪ್ರತ್ಯೇಕ ಟೆಂಟ್‌ ಹಾಕಲಾಗಿದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯು ಸಂಯುಕ್ತ ಕಿಸಾನ್‌ ಮೋರ್ಚಾ ಸಹಯೋಗದಲ್ಲಿ ಬುಧವಾರ ನರಗುಂದ, ನವಲಗುಂದ ರೈತ ಬಂಡಾಯದ ಸ್ಮರಣೆ ಮತ್ತು 41ನೇ ರೈತ ಹುತಾತ್ಮ ದಿನವನ್ನು ಹಮ್ಮಿ ಕೊಂಡಿತ್ತು. ನಿರಂತರ ಪ್ರತಿಭಟನೆ
ಯಲ್ಲಿ ಪಾಲ್ಗೊಳ್ಳುವ ರಾಜ್ಯದ ರೈತರಿಗಾಗಿ ಇದೇ ವೇಳೆ ಟೆಂಟ್‌ ಉದ್ಘಾಟಿಸಲಾಯಿತು.

ರೈತರು ಬೆಳೆದ ಉತ್ಪನ್ನ ಗಳಿಗೆ ಘೋಷಿಸಲಾದ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಿನ ಚೌಕಟ್ಟಿನಡಿ ತರಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘದ ಪ್ರಮುಖರಾದ ಚುಕ್ಕಿ ನಂಜುಂಡಸ್ವಾಮಿ ಆಗ್ರಹಿಸಿದರು.

ADVERTISEMENT

ರೈತರ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಅಥವಾ ಅದಕ್ಕಿಂತ ಅಧಿಕ ಬೆಲೆ ಸಿಗುವಂತಾಗಬೇಕು ಎಂದ ಅವರು, 4 ದಶಕಗಳಿಂದ ದೇಶದಾದ್ಯಂತ 3 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಸರ್ಕಾರಗಳು ಸೂಕ್ತ ಪರಿಹಾರ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ರೈತರು ಬಳಸುವ ವಿದ್ಯುತ್‌, ಗೊಬ್ಬರ, ಬಿತ್ತನೆ ಬೀಜಗಳಿಗೆ ಮೊದಲೇ ದರ ನಿಗದಿಪಡಿಸುವಂತೆ ಕೃಷಿ ಉತ್ಪನ್ನಗಳಿಗೆ ಮುಂಗಡವಾಗಿಯೇ ಸೂಕ್ತ ಬೆಲೆಯನ್ನು ನಿಗದಿ ಮಾಡಬೇಕು ಎಂದು ಸಂಯುಕ್ತ ಕಿಸಾನ್‌ ಮೋರ್ಚಾದ ರಾಕೇಶ್‌ ಟಿಕಾಯತ್‌ ಹಾಗೂ ಯುದ್ಧವೀರ ಸಿಂಗ್‌ ಹೇಳಿದರು.

ರೈತಮುಖಂಡ ಕೆ.ಟಿ. ಗಂಗಾಧರ್, ವಿದ್ಯಾಸಾಗರ್‌, ಮಂಜು ಕಿರಣ್‌, ರೂಪೇಶ್‌ ರೈ, ಲೋಕೇಶ ಗೌಡ, ಯಲ್ಲಪ್ಪ, ನಳಿನಿ ಸುರೇಶ್, ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.