ಬೆಂಗಳೂರು : ತಂತ್ರಜ್ಞಾನ ಆಧಾರಿತ ಕ್ಷೇತ್ರಗಳಲ್ಲಿ ಸೇವೆ ಒದಗಿಸುವ ಮೂಲಕ ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ಜತೆಗಿನ ಸಂಬಂಧ ವೃದ್ಧಿಗೆ ಕರ್ನಾಟಕ ಸರ್ಕಾರ ಉತ್ಸುಕವಾಗಿದೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಶನಿವಾರ ದುಬೈನಲ್ಲಿ ಆರಂಭವಾದ ‘ವರ್ಲ್ಡ್ ದುಬೈ ಎಕ್ಸ್‌ಪೋ–2020’ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕರ್ನಾಟಕ ನವೋದ್ಯಮಗಳ ತೊಟ್ಟಿಲು. ಹಲವು ಕ್ಷೇತ್ರಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಶಕ್ತಿ ರಾಜ್ಯಕ್ಕಿದೆ. ಯುಎಇಯಲ್ಲಿ ಸಾಗಣೆ, ಆರೋಗ್ಯ ಸೇವೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನೆರವು ನೀಡುವ ಸಾಮರ್ಥ್ಯ ರಾಜ್ಯದ ನವೋದ್ಯಮಗಳಿಗೆ ಇದೆ’ ಎಂದರು.
ಕರ್ನಾಟಕದಲ್ಲಿ ಹೂಡಿಕೆಗೆ ಹೆಚ್ಚು ಅವಕಾಶಗಳಿವೆ. ಯುಎಇ ಉದ್ಯಮಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಅನಿಮೇಷನ್ ಸೇರಿದಂತೆ ಹಲವು ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಪ್ರತ್ಯೇಕ ನೀತಿಗಳನ್ನು ಜಾರಿಗೊಳಿಸಿದೆ. ರಾಜ್ಯಕ್ಕೆ ಬರುವ ಹೂಡಿಕೆದಾರರಿಗೆ ಆಕರ್ಷಕ ಸೌಲಭ್ಯ ಮತ್ತು ಪ್ರೋತ್ಸಾಹ ನೀಡಲಾಗುವುದು ಎಂದು ಆಹ್ವಾನ ನೀಡಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ, ಕೈಮಗ್ಗ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಮೌದ್ಗಿಲ್, ಕೈಗಾರಿಕಾ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎನ್. ಶಿವಶಂಕರ್ ನಿಯೋಗದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.