ADVERTISEMENT

ರಾಜ್ಯದಲ್ಲಿ ಮಳೆ ಅಬ್ಬರ: ಮನೆ, ಬೆಳೆ ಹಾನಿ; ಕಾವೇರಿ ತೀರದಲ್ಲಿ ಪ್ರವಾಹ ಭೀತಿ

ಸುಳ್ಯ ತಾಲ್ಲೂಕಿನಲ್ಲಿ ಗುಡ್ಡ ಕುಸಿತ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 21:00 IST
Last Updated 5 ಆಗಸ್ಟ್ 2022, 21:00 IST
ದೇವರಹಿಪ್ಪರಗಿ-, ಬಸವನಬಾಗೇವಾಡಿ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಡೋಣಿ ನದಿಯ ಪ್ರವಾಹದಿಂದ ಸಾತಿಹಾಳ ಗ್ರಾಮದ ಬಳಿ ಮುಳುಗಿರುವುದು (ಎಡ ಚಿತ್ರ) ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಮಣ್ಣು ಕುಸಿದಿರುವುದು
ದೇವರಹಿಪ್ಪರಗಿ-, ಬಸವನಬಾಗೇವಾಡಿ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಡೋಣಿ ನದಿಯ ಪ್ರವಾಹದಿಂದ ಸಾತಿಹಾಳ ಗ್ರಾಮದ ಬಳಿ ಮುಳುಗಿರುವುದು (ಎಡ ಚಿತ್ರ) ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಮಣ್ಣು ಕುಸಿದಿರುವುದು   

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಶುಕ್ರವಾರವೂ ವರುಣನ ಆರ್ಭಟ ಮುಂದುವರಿದಿದೆ. ಹಲವೆಡೆ ಮನೆ, ಬೆಳೆ ಹಾನಿಯಾಗಿದೆ.

ವಿಜಯಪುರ ಜಿಲ್ಲೆಯಾದ್ಯಂತ ಬಹುತೇಕಹಳ್ಳ ಕೊಳ್ಳ, ಬಾಂದಾರ ಹಾಗೂ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ.ಬಸವನಬಾಗೇವಾಡಿ-ಮುದ್ದೇಬಿಹಾಳ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಸಾತಿಹಾಳ ಗ್ರಾಮದ ಹತ್ತಿರದಲ್ಲಿರುವ ಡೋಣಿ ನದಿಯ ಸೇತುವೆ ಪ್ರವಾಹದಲ್ಲಿ ಮುಳುಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿತು.

ದೇವರ ಹಿಪ್ಪರಗಿ ಪಟ್ಟಣದಲ್ಲಿ ಹೊಸೂರಹಳ್ಳ ತುಂಬಿ ತಾಳಿಕೋಟೆ ಸೇತುವೆ ಮೇಲೆ ನೀರು ಹರಿಯಿತು. ಐತಿಹಾಸಿಕ ಮಲ್ಲಯ್ಯ ದೇವಸ್ಥಾನದ ಗರ್ಭಗುಡಿಯೊಳಗೆ ನೀರು ಪ್ರವೇಶಿಸಿತು. ದೇವಸ್ಥಾನದ ಕಾಣಿಕೆ ಹುಂಡಿಯ ಹಣ ಕೆಸರು ನೀರಿನಲ್ಲಿ ತೊಯ್ದವು.

ADVERTISEMENT

ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ, ಧನ್ಯಾಳ, ದಾಸ್ಯಾಳ, ಕೊಟ್ಯಾಳ ಗ್ರಾಮಗಳು ಈ ನದಿ ದಡದಲ್ಲಿಯೇ ಇದ್ದು, ಮುಳುಗಡೆಯ ಭೀತಿ ಎದುರಿಸುತ್ತಿವೆ. ಹಲವು ರೈತರ ಜಮೀನುಗಳಿಗೆ ನುಗ್ಗಿದ ಮಳೆ‌ ನೀರಿನಿಂದ ಕಬ್ಬು, ತೊಗರಿ, ಉದ್ದು, ಹೆಸರು ಬೆಳೆಗಳನ್ನು ನೀರಲ್ಲಿ ನಿಂತು ಹಾಳಾಗಿವೆ.

ಮೈಸೂರು ಭಾಗದ ಐದು ಜಿಲ್ಲೆಗಳಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದ್ದು, ಕೊಡಗಿನ ಎಲ್ಲ ಶಾಲೆಗಳಿಗೆ ಆಗಸ್ಟ್ 6ರಂದು ರಜೆ ಘೋಷಿಸಲಾಗಿದೆ.ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು,ಶ್ರೀರಂಗಪಟ್ಟಣದ ಪಟ್ಟಣದ ಸ್ನಾನಘಟ್ಟ, ಪಶ್ಚಿಮವಾಹಿನಿ, ಕಾವೇರಿ ಸಂಗಮಕ್ಕೆ ಯಾರೂ ತೆರಳುವಂತಿಲ್ಲ. ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮೇಲೆ ಸಂಚಾರವನ್ನು ನಿಷೇಧಿಸಿದ್ದು, ಸೇತುವೆಯ ಎರಡೂ ಬದಿಯಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ.

ಕೆ.ಆರ್‌.ಪೇಟೆ ತಾಲ್ಲೂಕು ಕೋಟಹಳ್ಳಿ, ಶ್ರೀರಂಗಪಟ್ಟಣ ತಾಲ್ಲೂಕು ಮಹದೇವಪುರದಲ್ಲಿ ತಲಾ ಒಂದು ಮನೆ ಕುಸಿದಿದೆ. ನಾಗಮಂಗಲ ತಾಲ್ಲೂಕು ಅಣೆಚನ್ನಾಪುರದ ಬಳಿ ಗೂಡ್ಸ್‌ ವಾಹನ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಚಾಲಕನನ್ನು ರಕ್ಷಿಸಲಾಗಿದೆ.

ಮಡಿಕೇರಿ ತಾಲ್ಲೂಕಿನ ದಬ್ಬಡ್ಕದಲ್ಲಿ ಅಪಾಯದ ಸ್ಥಳದಲ್ಲಿದ್ದವರನ್ನು ಕಾಳಜಿ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ಚೆಂಬು ಗ್ರಾಮದಲ್ಲಿ ಮೇವಿನ ಕೊರತೆ ಎದುರಾಗಿದ್ದು, ಜಿಲ್ಲಾಡಳಿತ ಮೇವು ವಿತರಣೆ ಆರಂಭಿಸಿದೆ. ಹಾಸನ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹಿರೀಸಾವೆ ಹೋಬಳಿಯ ತೆಂಗಿನ ತೋಟಕ್ಕೆ ಹಳ್ಳದ ನೀರು ನುಗ್ಗಿದೆ.

ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ ಕಾಟ್ನಾಳ್ ಗ್ರಾಮದ ದೊಡ್ಡ ಕೆರೆ ಏರಿ ಕುಸಿದಿದೆ. ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆ ಪಂಚಾಯಿತಿ ವ್ಯಾಪ್ತಿಯ ಕೆಬ್ಬನಕೊಪ್ಪಲು, ಹಗರನ ಹಳ್ಳಿ , ಮರದೂರು, ತಟ್ಟೆಕೆರೆ ಗ್ರಾಮದಲ್ಲಿ ತಂಬಾಕು ಬ್ಯಾರನ್ ಕುಸಿದಿದೆ.

ತಮಿಳುನಾಡಿನ ಮೆಟ್ಟೂರು ಜಲಾಶಯದಿಂದ 2.10 ಲಕ್ಷ ಕ್ಯುಸೆಕ್‌ ನೀರನ್ನು ಹರಿಸಲಾಗುತ್ತಿದ್ದು, ನದಿ ಪಾತ್ರದ ಆಲಂಬಾಡಿ, ಆತೂರು, ಜಂಬಲ್‌ಪಟ್ಟಿ ಗ್ರಾಮಗಳಲ್ಲಿ ನೆರೆ ಭೀತಿ ಮೂಡಿದೆ. ಹೊಗೆನಕಲ್‌–ಗೋಪಿನಾಥಂ ಸೇತುವೆ ಜಲಾವೃತವಾಗಿದ್ದು ಸಂಚಾರಕ್ಕೆ ತೊಂದರೆ ಯಾಗಿದೆ. ಹೊಗೆನಕಲ್ ರಸ್ತೆಯಲ್ಲಿರುವ ಸಂಗೈಕೊಂಬು ಸೇತುವೆ ಮುಳುಗಡೆಯಾಗಿದೆ.

ಸುಳ್ಯ ತಾಲ್ಲೂಕಿನ ಮಡಪ್ಪಾಡಿಯ ಗೋಳಿಯಡಿಯಲ್ಲಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದು‌ ಬ್ಲಾಕ್ ಆಗಿ, ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಮಡಪ್ಪಾಡಿಯಿಂದ ಶೀರಡ್ಕ, ದೇರುಮಜಲು ಸಂಪರ್ಕಿಸುವ ರಸ್ತೆಯಲ್ಲಿ ಅಂಬೆಕಲ್ಲು ಎಂಬಲ್ಲಿ‌ ಬಿರುಕು ಕಾಣಿಸಿಕೊಂಡಿದೆ. ಪೂಂಬಾಡಿ ಸಂಪರ್ಕಿಸುವ ಶೆಟ್ಟಿಮಜಲು ಸೇತುವೆ ಮುಳುಗಡೆಯಾಗಿದೆ.

ತುಮಕೂರು ಜಿಲ್ಲೆಯಲ್ಲಿವಾರದಿಂದ ಸತತವಾಗಿ ಬೀಳುತ್ತಿದ್ದ ಮಳೆ ಶುಕ್ರವಾರ ಬಿಡುವು ಕೊಟ್ಟಿದೆ. ಮಧ್ಯಾಹ್ನ, ಸಂಜೆ ಅಲ್ಲಲ್ಲಿ ತುಂತುರು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.