ADVERTISEMENT

ನನ್ನ ಪರ ದೇಶಪಾಂಡೆ ಕೆಲಸ ಮಾಡಿಲ್ಲ: ಅಸ್ನೋಟಿಕರ್

ಪರಾಭವ ಮೈತ್ರಿ ಅಭ್ಯರ್ಥಿ ಆನಂದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2019, 18:51 IST
Last Updated 26 ಮೇ 2019, 18:51 IST
ಆನಂದ ಅಸ್ನೋಟಿಕರ್
ಆನಂದ ಅಸ್ನೋಟಿಕರ್   

ಕಾರವಾರ: ‘ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಪೂರ್ಣ ಮನಸ್ಸಿನಿಂದ ನನ್ನ ಪರ ಕೆಲಸ ಮಾಡದ ಪರಿಣಾಮ ಸೋಲು ಅನುಭವಿಸುವಂತಾಗಿದೆ’ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪರಾಭವ ಅಭ್ಯರ್ಥಿ ಆನಂದ ಅಸ್ನೋಟಿಕರ್ ಹೇಳಿದ್ದಾರೆ.

ನಗರದಲ್ಲಿ ಕೆಲವು ವಾಹಿನಿಗಳ ವರದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಕಾಂಗ್ರೆಸ್– ಜೆಡಿಎಸ್ ಮೈತ್ರಿಯ ಬಗ್ಗೆಯೂ ಬೇಸರ ವ್ಯಕ್ತಪಡಿಸಿದರು.

‘ಮೈತ್ರಿ ಇಲ್ಲದಿದ್ದರೆ ಎಚ್.ಡಿ.ದೇವೇಗೌಡ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ‌ಕೂಡ ಸೋಲುತ್ತಿರಲಿಲ್ಲ. ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸುತ್ತಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಮತಗಳು ಚುನಾವಣೆಯಲ್ಲಿ ಒಂದಾಗಿದ್ದು ಸಮಸ್ಯೆಯಾಯಿತು. ಮೈತ್ರಿ ಮಾಡಿಕೊಂಡಿದ್ದರಿಂದ ನಮಗೆ ಹಿನ್ನಡೆಯಾಗಿದೆ’ ಎಂದು ತಮ್ಮ ಸೋಲಿಗೆ ಕಾರಣವನ್ನು ವಿಶ್ಲೇಷಿಸಿದ್ದಾರೆ.

ADVERTISEMENT

‘ದೇಶದಲ್ಲಿ ಮೋದಿ ಅಲೆ ಇರಬಹುದು. ಆದರೆ, ಕ್ಷೇತ್ರದಲ್ಲಿ ಅನಂತಕುಮಾರ ಹೆಗಡೆ ವಿರುದ್ಧದ ಅಲೆಯೂ ಅಷ್ಟೇ ಇತ್ತು. ಅವರ ವಿವಾದಪೂರ್ಣ ಹೇಳಿಕೆಗಳು, ಅವರ ವರ್ತನೆಯಿಂದ ಮತದಾರರು ಬೇಸರವಾಗಿದ್ದೂ ಇದೆ. ಅಲ್ಲದೇ, ಐದು ಬಾರಿ ಸಂಸದರಾಗಿದ್ದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿರಲಿಲ್ಲ. ಮತದಾರರ ಈ ಬೇಸರವನ್ನು ನನ್ನೆಡೆಗೆ ಮತ ನೀಡುವ ಒಲವು ತೋರುವಂತೆ ಮಾಡಬಹುದಿತ್ತು. ಅಭಿವೃದ್ಧಿಕಾರ್ಯಗಳ ಪಟ್ಟಿಯೊಂದಿಗೆ, ನಮ್ಮ ಶ್ರದ್ಧೆ ಆಸಕ್ತಿ ತೋರುತ್ತಿದ್ದರೆ ನನ್ನ ಗೆಲುವು ಕಷ್ಟವಾಗುತ್ತಿರಲಿಲ್ಲ’ ಎಂದಿದ್ದಾರೆ.

'ಉತ್ತರ ಕನ್ನಡ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟರೆ ಸೋಲುತ್ತಾರೆ ಎಂದು ಈ ಹಿಂದೆ ದೇಶಪಾಂಡೆ ಅವರು ಕೆಲವು ಮಾಧ್ಯಮಗಳಲ್ಲಿ ಹೇಳಿದ್ದನ್ನು ಕೇಳಿದ್ದೆ. ಪೂರ್ವಗ್ರಹದೊಂದಿಗೆ ಪ್ರಚಾರಕ್ಕೆ ಬಂದಿರುವ ಅವರು ಇನ್ನೆಂಥ ಸಹಾಯ ಮಾಡಲು ಸಾಧ್ಯ?ಅರೆ ಮನಸಿನಿಂದಲೇ ಚುನಾವಣಾ ಪ್ರಚಾರ ಕಾರ್ಯಕ್ಕೆ ಬಂದರು. ಆದರೆ, ಅವರು ಗಟ್ಟಿಯಾಗಿ, ಸಂಪೂರ್ಣವಾಗಿ ನಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ. ಈ ಕ್ಷೇತ್ರದಲ್ಲಿ ಮನಸಿಟ್ಟು ನನ್ನ ಪರವಾಗಿ ಕೆಲಸ ಮಾಡಿದ್ದರೆ ನೂರಕ್ಕೆ ನೂರು ಪ್ರತಿಶತ ಗೆಲ್ಲುತ್ತಿದ್ದೆ' ಎಂದರು.

ಆನಂದ ಅಸ್ನೋಟಿಕರ್ ಸೋಲಲು ಶನಿದೋಷವೂ ಕಾರಣವಂತೆ:ಚುನಾವಣೆಗೂ ಮುಂಚೆ ಇದ್ದ ದೋಷ ಈವರೆಗೂ ನಿವಾರಣೆ ಆಗಿಲ್ಲವಂತೆ. ಇದಕ್ಕಾಗಿ ಅವರು₹ 50 ಲಕ್ಷ ಮೌಲ್ಯದ ನೀಲಮಣಿ ಹರಳನ್ನು ಧರಿಸಿರುವುದಾಗಿ ಮಾಧ್ಯಮವೊಂದಕ್ಕೆ ಭಾನುವಾರ ಹೇಳಿಕೆ ನೀಡಿದ್ದಾರೆ.

‘ಚುನಾವಣೆಗೂ ಮುಂಚೆ ಇದ್ದ ಶನಿದೋಷನಿವಾರಣೆಯಾಗದ ಕಾರಣಸೋಲು ಅನುಭವಿಸುವಂತಾಯಿತು. ಇನ್ನೂ ಸುಮಾರು ನಾಲ್ಕು ತಿಂಗಳು ಈ ದೋಷ ಇದೆ.ಇದರ ಪರಿಹಾರಕ್ಕಾಗಿಕಾಶ್ಮೀರದಿಂದ ನೀಲಮಣಿ ಹರಳನ್ನು ತರಿಸಿ,ಎಡಗೈನ ಮಧ್ಯ ಬೆರಳಿಗೆ ಧರಿಸಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

‘ವಾರದಲ್ಲಿ ಒಮ್ಮೆಈ ಹರಳನ್ನು ದೇವರ ಬಳಿ ಇಟ್ಟು, ಹಾಲಿನಅಭಿಷೇಕ ಮಾಡುತ್ತೇನೆ. ನಂತರ ಇದನ್ನು ಕೈಗೆಧರಿಸುತ್ತೇನೆ’ಎಂದೂ ಹೇಳಿಕೆ ನೀಡಿದ್ದಾರೆ. ಆನಂದ, ಈ ಮೊದಲು ಕೈಬೆರಳಿಗೆ ಧರಿಸುತ್ತಿದ್ದ ಚಿನ್ನದ ಉಂಗುರಗಳನ್ನು ಬಿಚ್ಚಿಟ್ಟಿದ್ದು, ಕೇವಲ ಈ ಹರಳಿನ ಉಂಗುರ ಕೈ ಬೆರಳಿನಲ್ಲಿದೆ. ಹೆಚ್ಚಿನ ಮಾಹಿತಿಗೆ ಅವರು ‘ಪ್ರಜಾವಾಣಿ’ಯ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.