ADVERTISEMENT

ಬೆಂಬಲ ನೀಡಿದ ಮಾಜಿ ಶಾಸಕರಿಂದಲೇ ಹೋರಾಟ: ಬಿಜೆಪಿ ಆರೋಪ

ಕಾರವಾರ ಬಂದರು ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 19:55 IST
Last Updated 16 ಜನವರಿ 2020, 19:55 IST

ಬೆಂಗಳೂರು: ಕಾರವಾರ ವಾಣಿಜ್ಯ ಬಂದರಿನ ವಿಸ್ತರಣೆ ಕಾಮಗಾರಿಯನ್ನು ಬೆಂಬಲಿಸಿದ್ದ ಕಾಂಗ್ರೆಸ್ ಮುಖಂಡರೇ ಈಗ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಶಾಂತಿ ಕದಡುವ ಪ್ರಯತ್ನ ನಡೆಸಿದ್ದಾರೆ ಎಂದು ಸಚಿವರು, ಬಿಜೆಪಿ ಶಾಸಕರು ಆರೋಪಿಸಿದರು.

ಬಂದರು ಹಾಗೂ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಕಾರವಾರ ಶಾಸಕಿ ರೂಪಾಲಿ ನಾಯ್ಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು.

‘2017 ಡಿಸೆಂಬರ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದರು ವಿಸ್ತರಣೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು.ಮೀನುಗಾರರು ತಮ್ಮ ವಹಿವಾಟು ಸ್ಥಗಿತಗೊಳಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾಜಿ ಶಾಸಕರಾದ ಸತೀಶ್ ಸೈಲ್, ಆನಂದ್ ಆಸ್ನೋಟಿಕರ್ ಸಹ ಅಂದು ಬೆಂಬಲ ನೀಡಿದ್ದರು. ಆದರೆ ಈಗ ಅವರೇ ಮುಂದೆ ನಿಂತುಕೊಂಡು ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಾರೆ. ಬಿಜೆಪಿಯನ್ನು ಗುರಿಯಾಗಿಸಿ ಹೋರಾಟ ರೂಪಿಸಲಾಗಿದೆ’ ಎಂದು ಟೀಕಿಸಿದರು.

ADVERTISEMENT

‘ಕೇಂದ್ರ–ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ₹125 ಕೋಟಿ ವೆಚ್ಚದಲ್ಲಿ ಬಂದರು ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಇದರಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಮೀನುಗಾರರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಬಂದರಿನ ಅಸ್ತಿತ್ವಕ್ಕೂ ಧಕ್ಕೆ ಬರುವುದಿಲ್ಲ ಎಂದು ಪರಿಸರವಾದಿಗಳಿಗೂ ತಿಳಿಸಿದ್ದೇನೆ. ಕ್ಷೇತ್ರದಲ್ಲಿರುವ ಬಂದರು ಉಳಿಸಿಕೊಳ್ಳುವುದು ನನ್ನ ಕರ್ತವ್ಯವಾಗಿದೆ’ ಎಂದು ರೂಪಾಲಿ ನಾಯ್ಕ ಹೇಳಿದರು.

ಮೀನುಗಾರ ಸಮುದಾಯದ ಮುಖಂಡರು, ಆ ಭಾಗದ ಶಾಸಕರನ್ನುವಿಧಾನಸೌಧಕ್ಕೆ ಕರೆದು ಶೀಘ್ರವೇ ಚರ್ಚಿಸಲಾಗುವುದು. ಈ ವಿಚಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಮನಕ್ಕೂ ತರಲಾಗಿದೆ ಎಂದು ಸಚಿವ ಪೂಜಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.