ADVERTISEMENT

ಮಂಗನ ಕಾಯಿಲೆ: ಒಂದು ಸಾವೂ ಸಂಭವಿಸದಂತೆ ಎಚ್ಚರವಹಿಸಲು ಶಾಸಕ ಆರಗ ಜ್ಞಾನೇಂದ್ರ

ವಿಶೇಷ ಸಭೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 12:09 IST
Last Updated 10 ಜನವರಿ 2019, 12:09 IST
ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಮಂಗನ ಕಾಯಿಲೆ ನಿರ್ವಹಣೆಗಾಗಿ ಅಧಿಕಾರಿಗಳ ಸಭೆ ನಡೆಯಿತು
ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಮಂಗನ ಕಾಯಿಲೆ ನಿರ್ವಹಣೆಗಾಗಿ ಅಧಿಕಾರಿಗಳ ಸಭೆ ನಡೆಯಿತು   

ತೀರ್ಥಹಳ್ಳಿ: ‘ಮಂಗನ ಕಾಯಿಲೆಯಿಂದ ಸಾಕಷ್ಟು ಸಾವು, ನೋವು ಅನುಭವಿಸಿದ ತಾಲ್ಲೂಕು ನಮ್ಮದು. ಈ ಬಾರಿ ಮಂಗನ ಕಾಯಿಲೆಯಿಂದ ಒಂದು ಸಾವು ಕೂಡ ಸಂಭವಿಸದಂತೆ ಎಚ್ಚರ ವಹಿಸಬೇಕು’ ಎಂದು ಅಧಿಕಾರಿ, ಸಿಬ್ಬಂದಿಗೆ ಶಾಸಕ ಆರಗ ಜ್ಞಾನೇಂದ್ರ ಸೂಚನೆ ನೀಡಿದರು.

ಗುರುವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ತಾಲ್ಲೂಕಿನ ಕೋಣಂದೂರು, ಮಳಲೀಮಕ್ಕಿ, ಹಾಗೂ ತೋಟದಕೊಪ್ಪದ ಕೆಲವರಲ್ಲಿ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಮೇಗರವಳ್ಳಿ ಸಮೀಪ ಅಚ್ಚೂರು, ಹೆಗ್ಗೋಡಿನಲ್ಲಿ ಮಂಗಗಳು ಸತ್ತ ವರದಿಯಾಗಿದೆ. ಎಲ್ಲಾ ಸಮಸ್ಯೆಯನ್ನೂ ಆರೋಗ್ಯ ಇಲಾಖೆ ಮೇಲೆಯೇ ಹೇರದೆ ಅರಣ್ಯ, ಪಶುವೈದ್ಯ ಇಲಾಖೆ ಸಹಯೋಗದಲ್ಲಿ ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

ಮಂಗನ ಕಾಯಿಲೆ ಲಸಿಕೆ ಲಭ್ಯವಿದೆ. ಈಗ ಒಂದು ದಿನದಲ್ಲೇ ರಕ್ತ ಪರೀಕ್ಷೆ ವರದಿ ಸಿಗುತ್ತದೆ. ಮಂಗಗಳು ಸತ್ತ ವರದಿ ಪಡೆದು, ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಕಿರಣ್ ಹೇಳಿದರು.

ರೈತರು ಕೊಟ್ಟಿಗೆಯ ಗೊಬ್ಬರಕ್ಕೆ ಬಳಸಲು ಕಾಡಿನಿಂದ ದರಗು (ಒಣಗೆಲೆ) ತರುತ್ತಾರೆ. ದರಗಿನಲ್ಲಿ ಅಂಟಿರುವ ಒಣಗು (ಉಣ್ಣೆ) ಮನುಷ್ಯರ ದೇಹಕ್ಕೆ ರೋಗ ಹರಡುತ್ತದೆ. ಇದರಿಂದಾಗಿಯೇ ಕಾಯಿಲೆಯನ್ನು ಮನೆಗೆ ತೆಗೆದುಕೊಂಡು ಬಂದಂತಾಗುತ್ತದೆ. ಹೀಗಾಗಿ, ಕಾಡಿನಿಂದ ದರಗು ತರವುದನ್ನು ಸದ್ಯಕ್ಕೆ ನಿಲ್ಲಿಸಬೇಕು ಎಂದು ತಿಳಿಸಿದರು.

ಮೃತಪಟ್ಟ ಮಂಗಗಳನ್ನು ಸುಟ್ಟು ಮೆಲಾಥಿಯಾನ್ ಪುಡಿಯನ್ನು ಸುತ್ತಲಿನ ಪ್ರದೇಶಕ್ಕೆ ಹಾಕಲಾಗುತ್ತದೆ. ಕರಪತ್ರಗಳನ್ನು ಹಂಚುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಮಂಗನ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಾಡಿಗೆ ಹೋಗುವವರು ಡಿಎಂಪಿ ಎಣ್ಣೆಯನ್ನು ಹಚ್ಚಿಕೊಳ್ಳಲು ಸೂಚಿಸಲಾಗಿದೆ. ಕಾಯಿಲೆ ಕಾಣಿಸಿಕೊಳ್ಳಬಹುದಾದ ಪ್ರದೇಶಗಳಲ್ಲಿ ತೀವ್ರ ನಿಗಾ ಇಡಲಾಗಿದೆ. ಉಣ್ಣೆ ಅಂಟದಂತೆ ತಡೆಯಲು ಜಾನುವಾರು ದೇಹಕ್ಕೂ ಹಚ್ಚುವ ತೈಲದ ಸರಬರಾಜು ಮಾಡುವಂತೆ ತಿಳಿಸಲಾಗಿದೆ ಎಂದು ಡಾ. ಕಿರಣ್ ಮಾಹಿತಿ ನೀಡಿದರು.

ತಾಲ್ಲೂಕಿನ ಎಲ್ಲಾ ಆರೋಗ್ಯ ಉಪ ಕೇಂದ್ರಗಳಲ್ಲಿ ಆರೋಗ್ಯ ಸಹಾಯಕಿಯರು ಉಳಿದುಕೊಳ್ಳಬೇಕು. ಬಹಳಷ್ಟು ಕಡೆಗಳಲ್ಲಿ ವಸತಿ ಗೃಹಗಳ ಕೊರತೆ, ಶಿಥಿಲಗೊಂಡ ಕಾರಣ ಹೊರಗಡೆ ವಾಸವಿದ್ದಾರೆ. ಶಿಥಿಲಗೊಂಡ ಕಟ್ಟಡದ ದುರಸ್ತಿಗೆ ಸರ್ಕಾರ ಅನುದಾನ ನೀಡಬೇಕು. ಮಂಗನ ಕಾಯಿಲೆ ತಡೆಗಟ್ಟಲು ಆಶಾ ಕಾರ್ಯಕರ್ತರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಆರಗ ಹೇಳಿದರು.

ಪಟ್ಟಣದ ಜೆಸಿ ಆಸ್ಪತ್ರೆಗೆ ಸರ್ಜನ್ ನೇಮಕಗೊಂಡಿದ್ದಾರೆ. ಅವರು ಕರ್ತವ್ಯ ಆರಂಭಿಸಿದ್ದಾರೆ. ಅವರನ್ನು ಬೇರೆ ಕಡೆಗೆ ನಿಯೋಜನೆ ಮಾಡದಂತೆ ತಾಲ್ಲೂಕು ವೈದ್ಯಾಧಿಕಾರಿ ಎಚ್ಚರ ವಹಿಸಬೇಕು. ಮಂಡಗದ್ದೆ, ಮೇಗರವಳ್ಳಿ ಭಾಗದಲ್ಲಿ ಮಂಗನ ಕಾಯಿಲೆ ಹರಡುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ, ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ವೈದ್ಯರಿಗೆ ಸೂಚನೆ ನೀಡಿದರು.

ವೇದಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನವಮಣಿ ರವಿಕುಮಾರ್, ಉಪಾಧ್ಯಕ್ಷೆ ಯಶೋದಾ ಮಂಜುನಾಥ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚಂದವಳ್ಳಿ ಸೋಮಶೇಖರ್, ತಹಶೀಲ್ದಾರ್ ಆನಂದಪ್ಪನಾಯ್ಕ್, ಇಒ ಧನರಾಜ್ ಇದ್ದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಗೀತಾ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಅಪೂರ್ವ ಶರಧಿ, ಆರೋಗ್ಯ, ಅರಣ್ಯ, ಪಶುಸಂಗೋಪನೆ, ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

* * *

ಅಧ್ಯಯನಕ್ಕೆ ಸ್ಕಾಟ್‌ಲ್ಯಾಂಡ್‌ ತಂಡ

ಮಂಗನ ಕಾಯಿಲೆ ಕುರಿತು ಸಂಶೋಧನೆ ನಡೆಸಲು ಸ್ಕಾಟ್‌ಲ್ಯಾಂಡ್‌ನ ತಂಡ ಬಂದಿದೆ. ಕೆಲವು ವಿಶ್ವವಿದ್ಯಾಲಯಗಳ ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ. ರೋಗ ಹರಡುವ ಮುನ್ನೂಚನೆ,ಔಷಧೋಪಚಾರ ಕುರಿತು ಅಧ್ಯಯನ ನಡೆಸುತ್ತಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಕಿರಣ್ ಮಾಹಿತಿ ನೀಡಿದರು.

* * *

ಕಟ್ಟೆಹಕ್ಕಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ ಎಂದು ಡಿಎಚ್ಒಗೆ ಹೇಳಿದರೆ. ‘ಇದ್ದಾರೆ ಕಂಡ್ರೀ’ ಎಂದು ಅವರು ಸುಳ್ಳು ಹೇಳುತ್ತಾರೆ. ಸರ್ಕಾರ ವೈದ್ಯರ ಸೇವೆಯನ್ನು ಹರಾಜು ಹಾಕುತ್ತಿದೆ. ಗ್ರಾಮೀಣ ಬಾಗಕ್ಕೆ ವೈದ್ಯರು ಬರುವುದೇ ಇಲ್ಲ.

-ಆರಗ ಜ್ಞಾನೇಂದ್ರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.