ADVERTISEMENT

ಕೆಲವರ ಹಸ್ತಕ್ಷೇಪದಿಂದ ಕಸಾಪ ಸ್ವಾಯತ್ತತೆಗೆ ಧಕ್ಕೆ: ಅಧ್ಯಕ್ಷ ಮಹೇಶ ಜೋಶಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 12:19 IST
Last Updated 6 ಡಿಸೆಂಬರ್ 2022, 12:19 IST
ಮಹೇಶ ಜೋಶಿ, ಕಸಾಪ ಅಧ್ಯಕ್ಷ
ಮಹೇಶ ಜೋಶಿ, ಕಸಾಪ ಅಧ್ಯಕ್ಷ   

ಹಾವೇರಿ: ‘ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತದ ವ್ಯಾಪ್ತಿಗೆ ಒಳಪಟ್ಟ ವಿಷಯಗಳ ಕುರಿತು ಕೆಲವರು ಅನಗತ್ಯವಾಗಿ ಪ್ರಸ್ತಾಪ ಮಾಡುತ್ತಿದ್ದಾರೆ. ಇದರಲ್ಲಿ ಸ್ಪಷ್ಟವಾಗಿ ದುರುದ್ದೇಶದ ಹಿನ್ನೆಲೆ ಕಾಣುತ್ತಿದೆ. ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳನ್ನು ದುರುಪಯೋಗ ಪಡಿಸಿಕೊಂಡು ಕೆಲವರು ಮಾಡುತ್ತಿರುವ ಹಸ್ತಕ್ಷೇಪವು ಕಸಾಪದ ಸ್ವಾಯತ್ತತೆಗೆ ಧಕ್ಕೆ ತರುವ ಪ್ರಯತ್ನ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚುನಾಯಿತ ಕಸಾಪ ಅಧ್ಯಕ್ಷರ ಜವಾಬ್ದಾರಿಯುತ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ನಾವು ಎಲ್ಲರ ಸಲಹೆಗಳನ್ನು ಗೌರವಿಸುತ್ತೇವೆ. ಆದರೆ, ಆಹ್ವಾನವಿಲ್ಲದೆ, ಕೇವಲ ಪ್ರಚಾರಕ್ಕಾಗಿ ಮಾಡುವ ಹಸ್ತಕ್ಷೇಪಗಳನ್ನು ಸಹಿಸುವುದಿಲ್ಲ ಎಂದರು.

ಅಧ್ಯಕ್ಷರೊಬ್ಬರ ತೀರ್ಮಾನವಲ್ಲ:

ADVERTISEMENT

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆ್ಯಪ್‌ ಬಳಕೆ ಮತ್ತು ಕಸಾಪ ಸದಸ್ಯತ್ವ ಕಡ್ಡಾಯ ಕುರಿತು ಆಕ್ಷೇಪಗಳು ವ್ಯಕ್ತವಾಗಿವೆ. ಸಮ್ಮೇಳನದ ಪ್ರತಿನಿಧಿಯಾಗಿ ಬರುವವರು ಪರಿಷತ್ತಿನ ಸದಸ್ಯತ್ವ ಪಡೆಯಬೇಕು ಎಂದು ನಿರೀಕ್ಷಿಸುವುದರಲ್ಲಿ ತಪ್ಪೇನಿದೆ?. ಇದು ಅಧ್ಯಕ್ಷರ ವೈಯಕ್ತಿಕ ತೀರ್ಮಾನವಾಗಿರದೆ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಮತ್ತು ಸದಸ್ಯತ್ವ ಸಮಿತಿಯ ಒಮ್ಮತದ ತೀರ್ಮಾನವಾಗಿದೆ. ಸಮ್ಮೇಳನ ವೀಕ್ಷಿಸಲು ಬರುವವರಿಗೆ ಮುಕ್ತ ಅವಕಾಶವಿದ್ದು, ಯಾವುದೇ ನಿರ್ಬಂಧವಿಲ್ಲ ಎಂದರು.

ಶುಲ್ಕ ಏರಿಕೆ ಅನಿವಾರ್ಯ:

ಹಾವೇರಿ ಸಮ್ಮೇಳನಕ್ಕೆ ಸರ್ಕಾರ ₹20 ಕೋಟಿ ಕೊಟ್ಟಿದ್ದರೂ, ₹500 ಪ್ರತಿನಿಧಿ ಶುಲ್ಕ ಪಡೆಯುವ ಕುರಿತು ಆಕ್ಷೇಪಣೆಗಳು ವ್ಯಕ್ತವಾಗಿವೆ. ಪ್ರತಿನಿಧಿ ಶುಲ್ಕ ಪಡೆಯುವುದು ಮೊದಲಿನಿಂದಲೂ ಜಾರಿಯಲ್ಲಿದೆ. ಪ್ರತಿನಿಧಿ ಶುಲ್ಕವು ಪ್ರತಿನಿಧಿಗಳ ಊಟ, ಸಾಮಾನ್ಯ ವಸತಿ ಮತ್ತು ಅವರಿಗೆ ನೀಡುವ ಕಿಟ್‌ ವೆಚ್ಚವನ್ನು ಒಳಗೊಂಡಿದೆ. ಇದರಲ್ಲಿ ಪರಿಷತ್ತು ಯಾವುದೇ ಲಾಭದ ದೃಷ್ಟಿ ಹೊಂದಿಲ್ಲ. ಹಿಂದಿನ ಸಮ್ಮೇಳನದಲ್ಲಿ ₹250 ಇದ್ದ ಪ್ರತಿನಿಧಿ ಶುಲ್ಕವನ್ನು ₹500ಕ್ಕೆ ಹೆಚ್ಚಿಸಲಾಗಿದೆ. ಇದಕ್ಕೆ ಎರಡು ವರ್ಷಗಳಿಂದ ಏರಿಕೆಯಾಗಿರುವ ಬೆಲೆ ಏರಿಕೆಯೇ ಕಾರಣ ಎಂದರು.

ಸಿಎಂ ಕೊಡುಗೆ ನೀಡಲಿ:

‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ’ವು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕಾನೂನಾಗಿ ಜಾರಿಗೆ ಬರುವ ನಿರೀಕ್ಷೆ ಇದೆ. ಈ ವಿಧೇಯಕವನ್ನು ಜಾರಿಗೆ ತಂದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡು–ನುಡಿಗೆ ಕೊಡುವ ದೊಡ್ಡ ಕೊಡುಗೆಯಾಗಲಿದೆ. ಹಾವೇರಿ ಸಾಹಿತ್ಯೋತ್ಸವ ವಿಜಯೋತ್ಸವವಾಗಲಿದೆ ಎಂದರು.

86ನೇ ಅಖಿಲ ಭಾರತದ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಮತ್ತು ಪ್ರಚಾರ ಸಾಮಗ್ರಿ ಸಿದ್ಧವಾಗಿದ್ದು, ಡಿ.10ರಂದು ಬಿಡುಗಡೆ ಮಾಡಲಿದ್ದೇವೆ
– ಮಹೇಶ ಜೋಶಿ, ಕಸಾಪ ಅಧ್ಯಕ್ಷ

ಸಹಾಯವಾಣಿ ಸ್ಥಾಪನೆ

ಆ್ಯಪ್‌ ಮೂಲಕ ಪ್ರತಿನಿಧಿ ನೋಂದಣಿ ಸಂದರ್ಭದಲ್ಲಿ ಕೆಲವರಿಗೆ ಸದಸ್ಯತ್ವ ಸಂಖ್ಯೆ ಮರೆತು ಹೋಗಿರುತ್ತದೆ. ಕೆಲವರಿಗೆ ಆ್ಯಪ್‌ ಬಳಕೆ ಬಗ್ಗೆ ಜ್ಞಾನವಿರುವುದಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಹೀಗಾಗಿ ಕಸಾಪ ವತಿಯಿಂದ ಡಿ.7ರಿಂದ 10 ಸಹಾಯವಾಣಿಗಳನ್ನು ಆರಂಭಿಸುತ್ತೇವೆ. ಮಾಹಿತಿಗೆ ಮೊ:8123878812, 9448519073 ಸಂಪರ್ಕಿಸಬಹುದು. ಸೈನಿಕರಿಗೆ ಪ್ರತಿನಿಧಿ ನೋಂದಣಿ ಶುಲ್ಕದಿಂದ ವಿನಾಯಿತಿ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.