ADVERTISEMENT

ಕಾಸರಗೋಡು– ದಕ್ಷಿಣ ಕನ್ನಡ ನಿತ್ಯ ಸಂಚಾರಕ್ಕೆ ತಡೆ

ತಿಂಗಳಿಗೊಮ್ಮೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ ಕೇರಳ ಸರ್ಕಾರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 19:31 IST
Last Updated 7 ಜುಲೈ 2020, 19:31 IST

ಮಂಗಳೂರು: ಉದ್ಯೋಗ ಮತ್ತು ಶಿಕ್ಷಣದ ಕಾರಣದಿಂದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ನಡುವೆ ನಿತ್ಯ ಸಂಚಾರಕ್ಕೆ ನೀಡಿದ್ದ ಅನುಮತಿಯನ್ನು ಕೇರಳ ಸರ್ಕಾರ ಹಿಂಪಡೆದಿದೆ. ಮಂಗಳವಾರದಿಂದಲೇ ಉಭಯ ರಾಜ್ಯಗಳ ನಡುವಿನ ನಿತ್ಯ ಸಂಚಾರಕ್ಕೆ ತಡೆಯೊಡ್ಡಲಾಗಿದೆ.

ಎರಡೂ ಜಿಲ್ಲೆಗಳ ಜನರ ಬೇಡಿಕೆ ಯಂತೆ ನಿತ್ಯ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲಾಡಳಿತಗಳು ಪಾಸ್‌ಗಳನ್ನು ವಿತರಿಸಿದ್ದವು. ಕಾಸರಗೋಡು ಜಿಲ್ಲೆಯಿಂದ ನಿತ್ಯವೂ ಮಂಗಳೂರಿಗೆ ಬಂದು ಹೋಗುತ್ತಿದ್ದ ಕೆಲವರಲ್ಲಿ ಕೋವಿಡ್‌ –19 ಸೋಂಕು ದೃಢಪಟ್ಟಿರುವ ಕಾರಣದಿಂದ ನಿತ್ಯ ಸಂಚಾರ ನಿರ್ಬಂಧಿಸಲಾಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣಿಸಿದವರು 28 ದಿನಗಳ ಕಾಲ ಅಲ್ಲಿಯೇ ತಂಗುವ ಷರತ್ತಿಗೆ ಒಪ್ಪಿದಲ್ಲಿ ಮಾತ್ರವೇ ಪ್ರಯಾಣಕ್ಕೆ ಅವಕಾಶ ನೀಡುವುದಾಗಿ ಕಾಸರಗೋಡು ಜಿಲ್ಲಾಡಳಿತ ತಿಳಿಸಿದೆ.

ನಿತ್ಯವೂ ಸಂಚರಿಸುತ್ತಿದ್ದ ಎರಡೂ ಜಿಲ್ಲೆಗಳ ನೂರಾರು ಜನರು ಮಂಗಳವಾರ ಬೆಳಿಗ್ಗೆ ತಲಪಾಡಿ ಚೆಕ್‌ಪೋಸ್ಟ್‌ ಬಳಿ ಬಂದಿದ್ದರು. ಆದರೆ, ತಿಂಗಳಿಗೊಮ್ಮೆ ಸಂಚರಿಸುವ ಷರತ್ತಿಗೆ ಒಪ್ಪದ ಕಾರಣ ಯಾರಿಗೂ ಅಂತರರಾಜ್ಯ ಗಡಿ ದಾಟಲು ಕೇರಳ ಪೊಲೀಸರು ಅವಕಾಶ ನೀಡಲಿಲ್ಲ.

ADVERTISEMENT

ಪೊಲೀಸರು ಮತ್ತು ಜನರ ನಡುವೆ ವಾಗ್ವಾದವೂ ನಡೆಯಿತು. ಪರಿಸ್ಥಿತಿ ನಿಯಂತ್ರಣಕ್ಕಾಗಿ ಹೆಚ್ಚುವರಿ ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗಿತ್ತು. ನಿತ್ಯ ಪ್ರಯಾಣಕ್ಕೆ ಅವಕಾಶ ಮುಂದುವರಿಸುವಂತೆ ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಮಂಜೇಶ್ವರ ಘಟಕದ ಮುಖಂಡರು ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.