ADVERTISEMENT

ಕಾಸರಗೋಡು: ಸಾವಿರಾರು ಮಂದಿಯನ್ನು ಭೇಟಿ ಮಾಡಿದ್ದ ಕೋವಿಡ್-19 ರೋಗಿ!

ಕೋವಿಡ್‌–19 ಸೋಂಕಿತನ ಎಡವಟ್ಟು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 15:25 IST
Last Updated 21 ಮಾರ್ಚ್ 2020, 15:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಮಾರ್ಚ್‌ 11ರಂದು ಬೆಳಿಗ್ಗೆ ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಾಸರಗೋಡಿನ ವ್ಯಕ್ತಿಯೊಬ್ಬ ಕೋವಿಡ್‌–19 ಸೋಂಕು ಇರಿಸಿಕೊಂಡೇ ಎಂಟು ದಿನಗಳ ಕಾಲ ಸಹಸ್ರಾರು ಮಂದಿಯನ್ನು ಭೇಟಿ ಮಾಡಿದ್ದಾನೆ.

ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕು ಖಚಿತವಾದ ಮೂರನೇ ಪ್ರಕರಣದಲ್ಲಿ ವ್ಯಕ್ತಿಯ ಸಂಚಾರದ ಮಾಹಿತಿ ಕಲೆಹಾಕಿದ ಅಧಿಕಾರಿಗಳು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಎಂಟು ದಿನಗಳ ಕಾಲ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ತಿರುಗುತ್ತಲೇ ಇದ್ದ ಈ ವ್ಯಕ್ತಿ, ಮದುವೆ, ಗೃಹಪ್ರವೇಶ, ನಾಮಕರಣ, ನಮಾಝ್‌ ಸೇರಿದಂತೆ ಜನದಟ್ಟಣೆಯ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾನೆ.

ಮಾರ್ಚ್‌ 11ರ ಬೆಳಗ್ಗಿನ ಜಾವ 3.15ಕ್ಕೆ ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಕ್ತಿ, ಸಮೀಪದ ಹೋಟೆಲ್‌ನಲ್ಲಿ ತಂಗಿದ್ದ. ಆ ದಿನ ರಾತ್ರಿ 12 ಗಂಟೆಯವರೆಗೆ ಮತ್ತೆ ಎರಡು ಬಾರಿ ವಿಮಾನ ನಿಲ್ದಾಣಕ್ಕೆ ಹೋಗಿ ಬಂದಿದ್ದಾನೆ. ಮರು ದಿನ ರಾತ್ರಿ 2.30ಕ್ಕೆ ರೈಲಿನಲ್ಲಿ ಕಲ್ಲಿಕೋಟೆಯಿಂದ ಹೊರಟಿದ್ದು ಬೆಳಿಗ್ಗೆ 7.30ಕ್ಕೆ ಕಾಸರಗೋಡು ಜಿಲ್ಲೆಯ ಎರಿಯಾಲ್‌ನಲ್ಲಿರುವ ಮನೆ ತಲುಪಿದ್ದ ಎಂಬ ಮಾಹಿತಿಯನ್ನು ಜಿಲ್ಲಾಡಳಿತ ಸಂಗ್ರಹಿಸಿದೆ.

ADVERTISEMENT

ಮಾರ್ಚ್‌ 12ರಂದು ಸಹೋದರನ ಮನೆಗೆ ಭೇಟಿನೀಡಿದ್ದ ಆತ, ಸಂಜೆ ಕ್ಲಬ್‌ವೊಂದಕ್ಕೆ ತೆರಳಿದ್ದ. ಮಾರ್ಚ್‌ 13ರಂದು ಬೆಳಿಗ್ಗೆ ಮಕ್ಕಳೊಂದಿಗೆ ಫುಟ್‌ಬಾಲ್‌ ಆಡಿದ್ದ. ಬಳಿಕ ಸ್ನೇಹಿತನ ಮನೆಗೂ ಭೇಟಿನೀಡಿದ್ದ. ಮಧ್ಯಾಹ್ನ ಎರಿಯಾಲ್‌ನ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ. ಹೋಟೆಲ್‌, ಬ್ಯಾಂಕ್‌, ಕ್ಲಬ್‌ಗಳಿಗೂ ಹೋಗಿದ್ದ.

ಮಾರ್ಚ್‌ 14ರಂದು ಉಳಿಯತ್ತಡ್ಕ ಮತ್ತು ಅಡೂರಿನಲ್ಲಿ ಎರಡು ಮದುವೆ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದ. ಮಾರ್ಚ್‌ 15ರಂದು ಮಂಜತ್ತಡುಕ್ಕ ಎಂಬಲ್ಲಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ. ಮಾರ್ಚ್‌ 16ರಂದು ಎರಿಯಾಲ್‌ನಲ್ಲಿ ಗೃಹಪ್ರವೇಶ ಮತ್ತು ನಾಮಕರಣ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದ. ಸಂಜೆ ಕಾಸರಗೋಡಿನ ನರ್ಸಿಂಗ್‌ ಹೋಂ ಒಂದಕ್ಕೆ ಭೇಟಿನೀಡಿದ್ದ ಎಂಬ ಮಾಹಿತಿಯನ್ನು ಜಿಲ್ಲಾಡಳಿತ ನೀಡಿದೆ.

ಮಾರ್ಚ್‌ 17ರಂದು ಕಾಸರಗೋಡು ಸರ್ಕಾರಿ ಆಸ್ಪತ್ರೆಗೆ ತೆರಳಿ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ನೀಡಿದ್ದ ಸೋಂಕಿತ, ಮಾರ್ಚ್‌ 19ರವರೆಗೂ ಎರಿಯಾಲ್‌ನಲ್ಲಿ ಸಹೋದರನ ಮನೆಯಲ್ಲೇ ಉಳಿದುಕೊಂಡಿದ್ದ. ಮಾರ್ಚ್‌ 19ರ ರಾತ್ರಿ 8.30ಕ್ಕೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಸಕರ ಭೇಟಿ: ಇದೇ ವ್ಯಕ್ತಿ ಕಾಸರಗೋಡು ಶಾಸಕ ಎನ್‌.ಎ.ನೆಲ್ಲಿಕುನ್ನು ಮತ್ತು ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್‌ ಅವರನ್ನೂ ಭೇಟಿ ಮಾಡಿರುವ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇಬ್ಬರೂ ಶಾಸಕರು ಮನೆಯಲ್ಲೇ ಉಳಿದುಕೊಂಡು, ಪರಿವೀಕ್ಷಣೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.