ADVERTISEMENT

ಕಾಶಿ ಯಾತ್ರಿಕರಿಗೆ ₹ 5 ಸಾವಿರ: ಸಿಎಂ ಬೊಮ್ಮಾಯಿ

ಸಹಾಯಧನ ವಿತರಣೆ, ಅರ್ಜಿ ಸಲ್ಲಿಸುವ ವೆಬ್‌ ಪೋರ್ಟಲ್‌ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 16:07 IST
Last Updated 14 ಜುಲೈ 2022, 16:07 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಕಾಶಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಂದರ್ಶಿಸಲಿ ಎನ್ನುವ ಉದ್ದೇಶದಿಂದ, ಅಲ್ಲಿಗೆ ತೆರಳುವ ಯಾತ್ರಾರ್ಥಿಗಳಿಗೆ ತಲಾ ₹ 5 ಸಾವಿರ ಸಹಾಯಧನ ಯೋಜನೆ ಆರಂಭಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮುಜರಾಯಿ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಸಾಂಕೇತಿಕವಾಗಿ ಸಹಾಯಧನ ವಿತರಿಸಿ, ಆನ್‌ಲೈನ್‌ ಮೂಲಕ ಹಣ ವರ್ಗಾವಣೆಗೆ ಚಾಲನೆ ನೀಡಿ ಮತ್ತು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ವೆಬ್‌ ಪೋರ್ಟಲ್‌ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕಾಶಿಯನ್ನು ಅಭಿವೃದ್ಧಿಪಡಿಸಿದ್ದಾರೆ. 23 ಘಾಟ್‌ಗಳನ್ನು ಸ್ವಚ್ಚಗೊಳಿಸಿ ಬದಲಾವಣೆ ಮಾಡಲಾಗಿದೆ. ದೇವಸ್ಥಾನದ ಆವರಣವನ್ನೂ ಸ್ವಚ್ಛಗೊಳಿಸಿ, ಭಕ್ತಿ– ಭಾವ ಮೂಡುವಂತೆ ಮಾಡಿದ್ದಾರೆ. ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತೆರಳಲಿ ಎಂಬ ಉದ್ದೇಶದಿಂದ ಆರಂಭಿಸಿದ ಸಹಾಯಧನ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ. ಯಾತ್ರಾರ್ಥಿಗಳು ಕಾಶಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಕರ್ನಾಟಕ ಛತ್ರದಲ್ಲಿ ನೋಂದಣಿ ಮಾಡಿಸಿಕೊಂಡು ದಾಖಲಾತಿಗಳನ್ನು ವೆಬ್‌ ಪೋರ್ಟ್‌ಲ್‌ಗೆ ಸಲ್ಲಿಸಿ, ಸಹಾಯಧನ ಪಡೆಯಬಹುದು’ ಎಂದರು.

ADVERTISEMENT

ಮುಜರಾಯಿ ಸಚಿವರಾದ ಶಶಿಕಲಾ ಅ ಜೊಲ್ಲೆ ಮಾತನಾಡಿ, ‘ಇಲಾಖೆಗೆ ಮುಖ್ಯಮಂತ್ರಿ‌ ಈ ವರ್ಷ ಅತಿಹೆಚ್ಚು ಅನುದಾನ ನೀಡಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 693 ಕೋಟಿ ಅನುದಾನ ಕೊಟ್ಟಿದ್ದಾರೆ. ಕಾಶಿ ಯಾತ್ರಾರ್ಥಿಗಳಿಗೆ ಪ್ರೋತ್ಸಾಹಧನ ನೀಡಬೇಕು ಎನ್ನುವುದು ನನ್ನ ಆಶಯವಾಗಿತ್ತು. ಅದಕ್ಕೆ ಸ್ಪಂದಿಸಿದ್ದಾರೆ’ ಎಂದರು.

ಕಾಶಿ ಯಾತ್ರೆಗೆ ತೆರಳಿದ್ದ 10 ಜನರಿಗೆ ಸಾಂಕೇತಿಕವಾಗಿ ಮುಖ್ಯಮಂತ್ರಿ ಸಹಾಯಧನ ವಿತರಿಸಿದರು. ಜಲಸಂಪನ್ಮೂಲ ಸಚಿವ‌ ಗೋವಿಂದ ಕಾರಜೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.