ADVERTISEMENT

ಕಾವೇರಿ ಸರ್ವಪಕ್ಷ ಸಭೆ ಶೀಘ್ರ: ಡಿ.ಕೆ. ಶಿವಕುಮಾರ್‌

ರಾಜ್ಯದ ಹಿತಾಸಕ್ತಿ ಕಡೆಗಣನೆ: ತಜ್ಞರ ಜೊತೆ ಸಿ.ಎಂ. ಚರ್ಚೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 18:59 IST
Last Updated 25 ಜೂನ್ 2018, 18:59 IST
   

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ರಚನೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಮುಂದಿನ ನಡೆಯ ಕುರಿತು ಚರ್ಚಿಸಲು ಶೀಘ್ರದಲ್ಲೇ ಸರ್ವಪಕ್ಷಗಳ ಸಭೆ ಕರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಕಾನೂನು ತಜ್ಞರ ಜೊತೆ ಸೋಮವಾರ ನಡೆದ ಸಭೆಯ ಬಳಿಕ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

‘ಕಾವೇರಿ ವಿಷಯದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ. ಹೀಗಾಗಿ, ಕಾನೂನು ಹೋರಾಟ ಸೇರಿದಂತೆ ಮುಂದಿರುವ ಆಯ್ಕೆಗಳ ಕುರಿತು ಚರ್ಚಿಸಲು 3–4 ದಿನಗಳ ಒಳಗೆ ರಾಜ್ಯದ ಸಂಸದರು, ಉಭಯ ಸದನಗಳ ನಾಯಕರು ಮತ್ತು ಪ್ರಮುಖರ ಸಭೆ ಕರೆಯಲು ತೀರ್ಮಾನಿಸಲಾಗಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಅಭಿಪ್ರಾಯ ತಿಳಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಜೂನ್‌ 18ರಂದೇ ಮುಖ್ಯಮಂತ್ರಿ ಪತ್ರ ಬರೆದಿದ್ದರು. ಕರೆದು ಮಾತನಾಡುವ ಭರವಸೆಯನ್ನೂ ಅವರು ನೀಡಿದ್ದರು. ಮಾತುಕತೆ ನಡೆಸುವ ಮುನ್ನವೇ ಒಂಬತ್ತು ಸದಸ್ಯರನ್ನೊಳಗೊಂಡ ಪ್ರಾಧಿಕಾರ ಮತ್ತು ಸಮಿತಿ ರಚಿಸಿ ಕೇಂದ್ರ ಸರ್ಕಾರ ಜೂನ್‌ 22ರಂದು ರಾತ್ರಿ ಅಧಿಸೂಚನೆ ಹೊರಡಿಸಿದೆ. ಈ ಸಮಿತಿಯಲ್ಲಿ ಆರು ಸದಸ್ಯರಿದ್ದರೂ ಸಭೆಗೆ ಕೋರಂ ಆಗಲಿದೆ’ ಎಂದು ತಿಳಿಸಿದರು.

‘ಕೇಂದ್ರದ ಈ ತೀರ್ಮಾನಕ್ಕೆ ರಾಜ್ಯದ ಪ್ರತಿಭಟನೆಯನ್ನು ಈಗಾಗಾಲೇ ವ್ಯಕ್ತಪಡಿಸಿದ್ದೇವೆ. ಅಲ್ಲದೆ, ಈ ಬಗ್ಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹಾಗೂ ದೆಹಲಿಯಲ್ಲಿ ರಾಜ್ಯದ ಪರ ವಾದ ಮಂಡಿಸುವ ಕಾನೂನು ತಜ್ಞರ ಜೊತೆ ಚರ್ಚಿಸಿ, ಸಲಹೆ ಪಡೆದಿದ್ದೇವೆ’ ಎಂದರು.

ಪ್ರಾಧಿಕಾರ ಮತ್ತು ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದರೂ, ಈ ವಿಷಯವನ್ನು ಸಂಸತ್‌ನಲ್ಲಿ ಚರ್ಚಿಸಬೇಕಿತ್ತು. ಆದರೆ, ಚರ್ಚೆ ನಡೆಸದೆ ಕೇಂದ್ರ ಸರ್ಕಾರ ಏಕಾಏಕಿ ಈ ತೀರ್ಮಾನ ತೆಗೆದುಕೊಂಡಿದೆ. ಈ ಅನ್ಯಾಯವನ್ನು ಪ್ರತಿಭಟಿಸುವುದು ಅನಿವಾರ್ಯ
ವಾಗಿದೆ’ ಎಂದೂ ವಿವರಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ‘ಸುಪ್ರೀಂ ಕೋರ್ಟ್‌ ಮತ್ತು ಕೇಂದ್ರ ಸರ್ಕಾರದ ಜೊತೆ ಸಂಘರ್ಷಕ್ಕೆ ನಾವು ಸಿದ್ಧರಿಲ್ಲ. ಈ ವಿಷಯದಲ್ಲಿ ವಿರೋಧ ಪಕ್ಷದ ನಾಯಕರು ಏನೇ ಟೀಕೆ ಮಾಡಲಿ. ಆದರೆ, ಗೆಜೆಟ್ ಪ್ರಕಟಣೆಗೂ ಮೊದಲು ಏನೆಲ್ಲ ಪ್ರಯತ್ನ ಮಾಡಬಹುದಾಗಿತ್ತೊ ಅದೆಲ್ಲವನ್ನೂ ಮುಖ್ಯಮಂತ್ರಿ ಮಾಡಿದ್ದಾರೆ’ ಎಂದರು.

ಕಾವೇರಿ: ಸದಸ್ಯರ ಹೆಸರು ಸೂಚನೆ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸಮಿತಿಗಳಿಗೆ ಇಬ್ಬರು ಸದಸ್ಯರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಸಚಿವ ಶಿವಕುಮಾರ್ ತಿಳಿಸಿದರು.

‘ಜುಲೈ 2ರಂದು ಪ್ರಾಧಿಕಾರದ ಸಭೆ ನಡೆಯುವ ಸೂಚನೆ ಇದೆ. ರಾಜ್ಯದ ಪ್ರತಿನಿಧಿಗಳು ಇಲ್ಲದೆ ಸಮಿತಿ ಯಾವುದಾದರೂ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಮತ್ತು ಕಾವೇರಿ ನೀರಾವರಿ ನಿಗಮದ ಆಡಳಿತ ವ್ಯವಸ್ಥಾಪಕ ಪ್ರಸನ್ನ ಅವರ ಹೆಸರನ್ನು ಸೂಚಿಸಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.