ADVERTISEMENT

ಆಲಮಟ್ಟಿಗೆ ಸ್ಥಳಾಂತರವಾಗದ ಕೆಬಿಜೆಎನ್‌ಎಲ್‌ ಕಚೇರಿ

ಜಲಸಂಪನ್ಮೂಲ ಇಲಾಖೆ ಆದೇಶಗಳಿಗೂ ಬಗ್ಗದ ಕೃಷ್ಣ ಭಾಗ್ಯ ಜಲ ನಿಗಮ

ಜಯಸಿಂಹ ಆರ್.
Published 16 ಮಾರ್ಚ್ 2025, 23:30 IST
Last Updated 16 ಮಾರ್ಚ್ 2025, 23:30 IST
2022ರ ಜೂನ್‌ 8ರಂದು ಜಲ ಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೃಷ್ಣ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿದ್ದ ಪತ್ರ
2022ರ ಜೂನ್‌ 8ರಂದು ಜಲ ಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೃಷ್ಣ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿದ್ದ ಪತ್ರ   

ಬೆಂಗಳೂರು: ಕೃಷ್ಣ ಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್‌) ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರಿಸಿ ಎಂದು ಜಲ ಸಂಪನ್ಮೂಲ ಇಲಾಖೆಯು 2019ರಿಂದ ಹಲವು ಬಾರಿ ಆದೇಶ ಕಳುಹಿಸಿದ್ದರೂ, ಅದು ಪಾಲನೆಯಾಗಿಲ್ಲ. 

ಈ ಸಂಬಂಧ ರಾಜ್ಯ ಪತ್ರದಲ್ಲಿನ ಅಧಿಸೂಚನೆ, ಸರ್ಕಾರಿ ಆದೇಶ ಮತ್ತು ಸೂಚನಾಪತ್ರಗಳನ್ನು ಕಡೆಗಣಿಸಿರುವ ನಿಗಮವು, ಕಚೇರಿಯನ್ನು ಬೆಂಗಳೂರಿನಲ್ಲೇ ಉಳಿಸಿಕೊಂಡಿದೆ.

ಈ ಮಧ್ಯೆ ಈಚೆಗೆ, ‘ಕಚೇರಿಯನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಸಂಬಂಧ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ’ ಎಂದು ಆರ್‌ಟಿಐ ಅರ್ಜಿಯೊಂದಕ್ಕೆ ನಿಗಮವು ಉತ್ತರ ನೀಡಿದೆ.

ADVERTISEMENT

ಉತ್ತರ ಕರ್ನಾಟಕದಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಆ ಭಾಗದ ಜನರಿಗೆ ಆಡಳಿತ ಹತ್ತಿರವಾಗಲಿ ಎಂದು 2019ರ ಜನವರಿಯಲ್ಲಿ ಕೃಷ್ಣ ಭಾಗ್ಯ ಜಲ ನಿಗಮವೂ ಸೇರಿ ವಿವಿಧ ಇಲಾಖೆಗಳ ಒಂಬತ್ತು ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಲು ಅಧಿಸೂಚನೆ ಹೊರಡಿಸಿತ್ತು.

2021ರಲ್ಲೂ ನಿಗಮದ ಕಚೇರಿ ಸ್ಥಳಾಂತರವಾಗಿರಲಿಲ್ಲ. ಈ ವಿಳಂಬವನ್ನು ಪ್ರಶ್ನಿಸಿ 2021ರಲ್ಲೇ ರಾಜ್ಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು.

ಈ ಸಂಬಂಧ ಜಲ ಸಂಪನ್ಮೂಲ ಇಲಾಖೆಗೆ 2021ರ ನವೆಂಬರ್ 24ರಂದು ಪತ್ರ ಬರೆದಿದ್ದ ನಿಗಮದ ವ್ಯವಸ್ಥಾಪಕ ನಿರ್ದೇಶಕ, ‘ಕಚೇರಿ ಸ್ಥಳಾಂತರದಿಂದ ಆಡಳಿತಾತ್ಮಕ ತೊಂದರೆಗಳಾಗುತ್ತವೆ. ಕೆಲ ಸಿಬ್ಬಂದಿಯನ್ನಷ್ಟೇ ವರ್ಗಾಯಿಸುತ್ತೇವೆ’ ಎಂದು ಪ್ರಸ್ತಾವ ಸಲ್ಲಿಸಿದ್ದರು.

ಪ್ರಸ್ತಾವವನ್ನು ನಿರಾಕರಿಸಿದ್ದ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ 2022ರ ಮೇ 12ರಂದು ತುರ್ತು ಪತ್ರ ಬರೆದಿದ್ದರು. ‘ಈ ಸಂಬಂಧ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕಿರುತ್ತದೆ ಮತ್ತು ಜನರ ಅನುಕೂಲಕ್ಕಾಗಿ ಕಚೇರಿಯನ್ನು ಸ್ಥಳಾಂತರ ಮಾಡಬೇಕಿರುತ್ತದೆ. ಒಂದು ವಾರದಲ್ಲಿ ಕಚೇರಿಯನ್ನು ಸ್ಥಳಾಂತರಿಸಿ, ಅನುಪಾಲನಾ ವರದಿ ನೀಡಿ’ ಎಂದು ಸೂಚಿಸಿದ್ದರು.

ಇಲಾಖೆಗೆ 2022ರ ಮೇ 19ರಂದು ಮತ್ತೆ ಪತ್ರ ಬರೆದಿದ್ದ ನಿಗಮದ ವ್ಯವಸ್ಥಾಪಕ ನಿರ್ದೇಶಕ, ‘ನಿಗಮದ ಸಂಪರ್ಕ ಕಚೇರಿ ಮತ್ತು ಕನಿಷ್ಠ ಸಿಬ್ಬಂದಿಯನ್ನು ಬೆಂಗಳೂರಿನಲ್ಲೇ ಉಳಿಸಿಕೊಂಡು, ಉಳಿದ ಸಿಬ್ಬಂದಿಯನ್ನು 4 ರಿಂದ 6ವಾರಗಳಲ್ಲಿ ಸ್ಥಳಾಂತರಿಸುತ್ತೇವೆ’ ಎಂದು ಮರುಪ್ರಸ್ತಾವ ಸಲ್ಲಿಸಿದ್ದರು.

ಇಲಾಖೆಯು ಇದನ್ನೂ ನಿರಾಕರಿಸಿತ್ತು. ‘ನಿಮ್ಮದು ಸರ್ಕಾರದ ಜನಪರ ನೀತಿಗೆ ವಿರುದ್ಧದ ಧೋರಣೆಯಾಗಿರುತ್ತದೆ. ಇನ್ನೊಂದು ವಾರದಲ್ಲಿ ಕಚೇರಿ ಸ್ಥಳಾಂತರಿಸಿ. ಈ ಸಂಬಂಧ ಇನ್ನು ಮುಂದೆ ಯಾವುದೇ ಪತ್ರ ವ್ಯವಹಾರ ನಡೆಸಬೇಡಿ’ ಎಂದು ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕಟ್ಟುನಿಟ್ಟಾಗಿ 2022ರ ಜೂನ್‌ 6ರಂದು ಸೂಚಿಸಿದ್ದರು.

‘ಕಚೇರಿ ಸ್ಥಳಾಂತರಕ್ಕೆ ಆದೇಶ ನೀಡಲಾಗಿದೆ’ ಎಂದು ಇಲಾಖೆಯು ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಆದರೆ ಕಚೇರಿ ಈವರೆಗೂ ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿದೆ.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ನಿಗಮದ ವ್ಯವಸ್ಥಾಪಕರಿಗೆ ಹಲವು ಬಾರಿ ಮಾಡಿದ ಕರೆಗಳನ್ನು ಅವರು ಸ್ವೀಕರಿಸಲಿಲ್ಲ. ವಾಟ್ಸ್‌ಆ್ಯಪ್‌ ಸಂದೇಶಕ್ಕೂ ಪ್ರತಿಕ್ರಿಯೆ ನೀಡಿಲ್ಲ.

‘ ಆರ್‌ಟಿಐ ಅರ್ಜಿಗೆ ಸುಳ್ಳು ಉತ್ತರ’

ಕಚೇರಿ ಸ್ಥಳಾಂತರಕ್ಕೆ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಜಲಸಂಪನ್ಮೂಲ ಇಲಾಖೆಯಿಂದ ನಿಗಮಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರವು ಹೈಕೋರ್ಟ್‌ಗೂ ಪ್ರಮಾಣ ಪತ್ರ ಸಲ್ಲಿಸಿದೆ. ಆದರೆ ಸರ್ಕಾರದಿಂದ ಆದೇಶವೇ ಬಂದಿಲ್ಲ ಎಂದು ನಿಗಮ ಆರ್‌ಟಿಐ ಅರ್ಜಿಗೆ ಸುಳ್ಳು ಉತ್ತರ ನೀಡಿದೆ. ಬೆಂಗಳೂರಿನಲ್ಲಿ ಆರಾಮವಾಗಿ ಇರುವ ಅಧಿಕಾರಿಗಳಿಗೆ, ಆಲಮಟ್ಟಿಗೆ ಬರಲು ಮನಸಿಲ್ಲ. ಅಧಿಕಾರಿಗಳ ಸ್ವಹಿತಾಸಕ್ತಿ ಕಾರಣದಿಂದ ನಮ್ಮ ಭಾಗದ ಜನರಿಗೆ ತೊಂದರೆಯಾಗುತ್ತಿದೆ.

ಯಾಸಿನ್‌ ಎನ್‌.ಜವಳಿ, ಅಧ್ಯಕ್ಷ, ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.