ADVERTISEMENT

ಕೆಬಿಜೆಎನ್‌ಎಲ್‌ | ಪರಿಹಾರ ನೆಪದಲ್ಲಿ ಅಕ್ರಮ: ಡಿ.ಕೆ.ಶಿವಕುಮಾರ್

ಸಮಗ್ರ ತನಿಖೆ– ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 16:57 IST
Last Updated 23 ಜುಲೈ 2024, 16:57 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ ಪರಿಹಾರ ಕೊಡಿಸುವ ನೆಪದಲ್ಲಿ ಅಕ್ರಮ ನಡೆದಿದ್ದು, ಇದರ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಈ ವಿಷಯ ತಿಳಿಸಿದರು.

‘ನ್ಯಾಯಾಲಯಗಳಲ್ಲಿ ಭೂಸ್ವಾಧೀನದ ಕುರಿತು ಪ್ರಕರಣಗಳು ನಡೆಯುತ್ತಿವೆ. ವಿಜಯಪುರ, ಬಾಗಲಕೋಟೆ, ರಾಯಚೂರು ಭಾಗದಲ್ಲಿ ನ್ಯಾಯಾಲಯದ ಮೂಲಕ ಎಕರೆಗೆ ₹74 ಲಕ್ಷ ಹಾಗೂ ನಗರಕ್ಕೆ ಹೊಂದಿಕೊಂಡ ಜಮೀನಿಗಳಲ್ಲಿ ಎಕರೆಗೆ ₹1.26 ಕೋಟಿ ಪರಿಹಾರ ಪಡೆಯುತ್ತಿದ್ದಾರೆ. ಸುಮಾರು 285 ಪ್ರಕರಣಗಳಲ್ಲಿ ಈ ರೀತಿಯಾಗಿದೆ. 367 ಪ್ರಕರಣಗಳಿಗೆ ಪುನರ್‌ ವಸತಿ ಕಲ್ಪಿಸುವ ವಿಚಾರವಾಗಿ ಒಂದು ಎಕರೆಗೆ ₹5.18 ಕೋಟಿ ಲಕ್ಷ ಪರಿಹಾರ ನೀಡಬೇಕು ಎಂದು ಕೋರ್ಟ್‌ ಆದೇಶ ಮಾಡಿದೆ. ಪೆರಿಫೆರಲ್‌ ರಿಂಗ್‌ ರಸ್ತೆಗೆ ಬೆಂಗಳೂರಿನಲ್ಲೇ ಇಷ್ಟು ದೊಡ್ಡ ಮೊತ್ತ ಪರಿಹಾರ ನೀಡಲು ಆಗುತ್ತಿಲ್ಲ’ ಎಂದರು.

ADVERTISEMENT

‘ಭೂಸ್ವಾಧೀನ ಪ್ರಕರಣಗಳನ್ನು ನಡೆಸುತ್ತಿರುವ ಎಲ್ಲಾ ಸರ್ಕಾರಿ ವಕೀಲರನ್ನು ಹಿಂದಕ್ಕೆ ಪಡೆಯಲಾಗುವುದು. ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು. ಇದರ ಬಗ್ಗೆ ಕಾನೂನು ಸಚಿವರ ಜತೆ ಚರ್ಚೆ ನಡೆಸಲಾಗುವುದು’ ಎಂದು ಶಿವಕುಮಾರ್‌ ಹೇಳಿದರು.

‘ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಸಚಿವ ಸಂಪುಟ ಉಪಸಮಿತಿ ಮಾಡಿ ಎಕರೆಗೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈಗ ದುಪ್ಪಟ್ಟು ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಇದಕ್ಕೆ ಎಲ್ಲಿಂದ ಹಣ ತರುವುದು’ ಎಂದು ಪ್ರಶ್ನಿಸಿದರು.

‘ಕೃಷ್ಣಾ ಭಾಗ್ಯ ಜಲ ನಿಗಮದ ಅಡಿ ಕೈಗೊಂಡಿರುವ ಕಾರ್ಯಕ್ರಮಗಳು ಮುಗಿಯಲು ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ನಮ್ಮ ಸರ್ಕಾರ ಆದ್ಯತೆ ಮೇರೆಗೆ ಕೆಲಸ ಮಾಡುತ್ತಿದೆ. ಈ ಯೋಜನೆಯ ಬಗ್ಗೆ ಪುನರ್‌ ಪರಿಶೀಲನೆ ನಡೆಸಿದಾಗ ಗಾಬರಿ ಹುಟ್ಟಿಸುವ ಸಂಗತಿಗಳು ಬೆಳಕಿಗೆ ಬಂದಿವೆ’ ಎಂದರು.

ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರ ಕಾಲದಲ್ಲಿ ಈ ಅಣೆಕಟ್ಟನ್ನು ನಿರ್ಮಾಣ ಮಾಡುವ ವೇಳೆ ಅನೇಕ ಜನರು ₹1 ಸಾವಿರ, ₹2 ಸಾವಿರಕ್ಕೆ ಜಮೀನು ಬಿಟ್ಟುಕೊಟ್ಟಿದ್ದಾರೆ. ಐದು ವರ್ಷದ ಹಿಂದೆಯೂ ರೈತರು ಎಕರೆಗೆ ₹5 ಸಾವಿರ ಪಡೆದು ಜಮೀನು ನೀಡಿದ್ದಾರೆ ಎಂದು ಶಿವಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.