ADVERTISEMENT

ಕೆ.ಸಿ.ವ್ಯಾಲಿ ಯೋಜನೆ: ಪಿಐಎಲ್ ಬೇರೊಂದು ನ್ಯಾಯಪೀಠಕ್ಕೆ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 9:13 IST
Last Updated 4 ಜುಲೈ 2018, 9:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ 170ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಕೆ.ಸಿ.ವ್ಯಾಲಿ ಯೋಜನೆ ಪ್ರಶ್ನಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿ.ಐ.ಎಲ್) ಬೇರೊಂದು ನ್ಯಾಯಪೀಠಕ್ಕೆ ವರ್ಗಾಯಿಸಲಾಗಿದೆ.

ಈ ಕುರಿತಂತೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

"ಬೆಳ್ಳಂದೂರು ಕೆರೆಗೆ ಕಲುಷಿತ ನೀರು ಹರಿಸಲಾಗುತ್ತಿದೆ ಎಂದು ಆಕ್ಷೇಪಿಸಿ ಇದೇ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಪಿಐಎಲ್ ಜೊತೆಯಲ್ಲೇ ಈ ಪ್ರಕರಣದ ವಿಚಾರಣೆಯೂ ನಡೆಯಲಿ" ಎಂದು ನ್ಯಾಯಪೀಠ ಅರ್ಜಿ ವರ್ಗಾವಣೆಗೆ ಆದೇಶಿಸಿತು.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪ್ರಿನ್ಸ್ ಐಸಾಕ್ ಅವರು, 'ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.‌ಇದು ಅವೈಜ್ಞಾನಿಕ ಕ್ರಮದಿಂದ ಕೂಡಿದ್ದು ಈ ಜಿಲ್ಲೆಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಮಧ್ಯಂತರ ಆದೇಶ ನೀಡಬೇಕು" ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, "ಹಾಗಾದರೆ ಈ ನೀರು ಮೊದಲು ಎಲ್ಲಿಗೆ ಹೋಗುತ್ತಿತ್ತು? ಈಗ ಎಲ್ಲಿಗೆ ಹೋಗಬೇಕು" ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಐಸಾಕ್, "ಮೊದಲು ಇಲ್ಲಿನ ಸ್ಥಳೀಯ ಕೆರೆಗಳಿಗೆ ಈ ನೀರು ಹರಿದು ಹೋಗುತ್ತಿತ್ತು" ಎಂದರು.

"ಹಾಗಾದರೆ ಈ ಸ್ಥಳೀಯ ಕೆರೆಗಳು ಕಲುಷಿತ ಆಗಬೇಕೆ" ಎಂದು ನ್ಯಾಯಪೀಠ ಮರುಪ್ರಶ್ನೆ ಮಾಡಿತು.

ಬೆಳ್ಳಂದೂರು ಕೆರೆಗೆ ಸಂಬಂಧಿಸಿದ ಪ್ರಕರಣ ಹಸಿರು ನ್ಯಾಯ ಮಂಡಳಿ (ಎನ್ ಜಿ ಟಿ) ಮುಂದಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಕೀಲ ಗುರುರಾಜ್ ಜೋಷಿ ನ್ಯಾಯಪೀಠಕ್ಕೆ ತಿಳಿಸಿದರು‌.

ಹಾಗಾದರೆ ಈ ಪ್ರಕರಣವನ್ನೂ ಹಸಿರು ನ್ಯಾಯ ಮಂಡಳಿ ಮುಂದೆ ಯಾಕೆ ಯಾರೂ ಪ್ರಶ್ನಿಸಿಲ್ಲವೇ" ಎಂದು ನ್ಯಾಯಮೂರ್ತಿಗಳು ಕೇಳಿದರು.

ಇದಕ್ಕೆ ಜೋಷಿ, "ಯಾರೂ ಪ್ರಶ್ನಿಸಿಲ್ಲ" ಎಂದು ಉತ್ತರಿಸಿದರು.

ಇದನ್ನು ಆಲಿಸಿದ ನ್ಯಾಯ ಪೀಠ, "ಈ ಪ್ರಕರಣವನ್ನು ಬೆಳ್ಳಂದೂರು ಕೆರೆ ಪ್ರಕರಣ ಸಂಬಂಧ ಇದೇ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಪಿಐಎಲ್ ಜೊತೆಗೆ ವಿಚಾರಣೆ ನಡೆಸಲಿ" ಎಂದು ನಿರ್ದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.