ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ.
ಆಕ್ಷೇಪಣೆಗಳು ಇದ್ದಲ್ಲಿ ಆಗಸ್ಟ್ 2ರಂದು ಬೆಳಿಗ್ಗೆ 11 ಗಂಟೆ ಒಳಗೆ ಇ-ಮೇಲ್ ಮೂಲಕ ಕೆಇಎಗೆ ಸಲ್ಲಿಸಬಹುದು. ಅದನ್ನು ಪರಿಶೀಲಿಸಿದ ಬಳಿಕ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂತಿಮ ಪಟ್ಟಿ ಪ್ರಕಟಣೆ ಬಳಿಕ ವೈದ್ಯಕೀಯ ಕೋರ್ಸ್ ಹೊರತುಪಡಿಸಿ, ಎಂಜಿನಿಯರಿಂಗ್, ಕೃಷಿ ಇತ್ಯಾದಿ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ರಾಷ್ಟ್ರ ಮಟ್ಟದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಹೋಮಿಯೋಪಥಿ ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆಯ ಪಟ್ಟಿ ಇನ್ನೂ ಪ್ರಕಟವಾಗದ ಕಾರಣ, ಆ ಕೋರ್ಸ್‌ಗಳ ಪ್ರವೇಶಕ್ಕೆ ಸದ್ಯಕ್ಕೆ ರಾಜ್ಯದಲ್ಲಿ ಕೂಡ ಅವಕಾಶ ಇರುವುದಿಲ್ಲ. ಅಲ್ಲಿ ಪಟ್ಟಿ ಪ್ರಕಟವಾದ ನಂತರ ಆ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಸೀಟು ಹಂಚಿಕೆ ನಂತರ ಅಭ್ಯರ್ಥಿಗಳು ತಮಗೆ ಸಿಕ್ಕಿರುವ ಸೀಟು ಇಷ್ಟ ಇದೆಯೊ, ಇಲ್ಲವೊ ಎಂಬುದನ್ನು ಕಡ್ಡಾಯವಾಗಿ ಛಾಯ್ಸ್ ದಾಖಲಿಸುವುದರ ಮೂಲಕ ತಿಳಿಸಬೇಕು. ಒಂದು ವೇಳೆ ಛಾಯ್ಸ್ ದಾಖಲಿಸದೇ ಇದ್ದಲ್ಲಿ, ಅಂತಹವರನ್ನು ನಂತರದ ಸುತ್ತಿನಲ್ಲಿ ಸೀಟು ಹಂಚಿಕೆಗೆ ಪರಿಗಣಿಸುವುದಿಲ್ಲ. ಅಲ್ಲದೆ ಅವರನ್ನು ಇಡೀ ಪ್ರಕ್ರಿಯೆಯಿಂದಲೇ ಹೊರ ಹಾಕಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.