ADVERTISEMENT

ವೈದ್ಯಕೀಯ ಸೀಟು ಪಡೆಯಲು ಅಡ್ಡದಾರಿ: ನಕಲಿ ಪ್ರಮಾಣಪತ್ರ– ತಪಾಸಣೆಗೆ ತಂಡ

ಅಂಗವಿಕಲ, ಎನ್‌ಆರ್‌ಐ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲು ಅಡ್ಡದಾರಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 16:10 IST
Last Updated 22 ಜುಲೈ 2025, 16:10 IST
ಕೆಇಎ
ಕೆಇಎ   

ಬೆಂಗಳೂರು: ಅಂಗವಿಕಲತೆಯ ನಕಲಿ ಪ್ರಮಾಣಪತ್ರ ಪಡೆದು 2024-25ನೇ ಸಾಲಿನಲ್ಲಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದ ಮೂವರು ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ತಜ್ಞ ವೈದ್ಯರನ್ನು ಒಳಗೊಂಡ ತಂಡ ರಚಿಸಿದೆ.

ಅಂಗವಿಕಲರ ಪ್ರಮಾಣಪತ್ರ ಸಲ್ಲಿಸಿ, ಅವರಿಗೆ ಮೀಸಲಾದ ಕೋಟಾದ ಅಡಿ ಮೂವರು ವಿದ್ಯಾರ್ಥಿಗಳು ವೈದ್ಯಕೀಯ ಸೀಟು ಪಡೆದಿದ್ದಾರೆ. ವಾಸ್ತವದಲ್ಲಿ ಅವರಿಗೆ ಯಾವುದೇ ಅಂಗವೈಕಲ್ಯ ಇಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘಟನೆಯೊಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ದೂರು ನೀಡಿತ್ತು. ದೂರು ಸ್ವೀಕರಿಸಿದ್ದ ಕೆಇಎ, ವಿದ್ಯಾರ್ಥಿಗಳ ಅಂಗವೈಕಲ್ಯ ಕುರಿತು ತಜ್ಞ ವೈದ್ಯರಿಂದ ಪರಿಶೀಲಿಸಿ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಪತ್ರ ಬರೆದಿತ್ತು.

‘ವಿದ್ಯಾರ್ಥಿ ಪೋಷಕರ ಸಂಘಟನೆಯೊಂದು ಸಲ್ಲಿಸಿದ ವಿದ್ಯಾರ್ಥಿಗಳ ಆರೋಗ್ಯದ ವಿವರಗಳನ್ನು ಒಳಗೊಂಡ ದಾಖಲೆಗಳನ್ನು ಪರೀಕ್ಷಾ ಪ್ರಾಧಿಕಾರ ನಿರ್ದೇಶನಾಲಯಕ್ಕೆ ಕಳುಹಿಸಿದೆ. ಅವರು ಸಲ್ಲಿಸಿದ ದಾಖಲೆಗಳಲ್ಲಿರುವ ಅಂಗವೈಕಲ್ಯದ ಸ್ವರೂಪದ ಆಧಾರದಲ್ಲಿ  ತಪಾಸಣೆ ನಡೆಸಲು ಜಯದೇವ ಆಸ್ಪತ್ರೆ ಸೇರಿದಂತೆ ವಿವಿಧ ತಜ್ಞರನ್ನು ಒಳಗೊಂಡ ತಂಡ ರಚಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಎನ್‌ಆರ್‌ಐನಲ್ಲೂ ನಕಲಿ ಕೋಟಾ

ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳಲ್ಲಿ ಶೇ 15ರಷ್ಟು ಅನಿವಾಸಿ ಭಾರತೀಯರ ಕೋಟಾಕ್ಕೆ (ಎನ್‌ಆರ್‌ಐ) ಮೀಸಲಿಡಲಾಗಿದೆ. ಆದರೆ, ಸಾಕಷ್ಟು ಸೀಟುಗಳು ಉಳಿಕೆಯಾಗುತ್ತಿರುವ ಕಾರಣ ಹಲವು ಮಧ್ಯವರ್ತಿಗಳು ವಿದ್ಯಾರ್ಥಿಗಳಿಗೆ ನಕಲಿ ಎನ್‌ಆರ್‌ಐ ಪ್ರಮಾಣಪತ್ರ ನೀಡಿ, ವಿವಿಧ ಕಾಲೇಜುಗಳಿಗೆ ಪ್ರವೇಶ ಪಡೆಯಲು ನೆರವಾಗುತ್ತಿದ್ದಾರೆ. ಇಂತಹ ಒಂದು ಪ್ರಕರಣ ಕಳೆದ ವಾರ ಪತ್ತೆಯಾಗಿದ್ದು, ನಕಲಿ ಎನ್‌ಆರ್‌ಐ ಪ್ರಮಾಣಪತ್ರ ಒದಗಿಸಿದ ಮಧ್ಯವರ್ತಿ ವಿರುದ್ಧ ಕೆಇಎ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ  ದಾಖಲಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.