
ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕನ್ನಡ ಮಾಧ್ಯಮ, ಗ್ರಾಮೀಣ ವ್ಯಾಸಂಗ ಪ್ರಮಾಣಪತ್ರಗಳನ್ನು ಸೇವಾ ಸಿಂಧು ಪೋರ್ಟಲ್ (ಆನ್‌ಲೈನ್) ಮೂಲಕ ವಿತರಿಸಲು ಕ್ರಮಕೈಗೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶಾಲಾ ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ.
2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ದಾಖಲೆಗಳ ತ್ವರಿತ ಪರಿಶೀಲನೆಗೆ ಆದ್ಯತೆ ನೀಡಲಾಗಿದೆ. ಸೀಟು ಹಂಚಿಕೆ ಪ್ರಕ್ರಿಯೆ ಕೆಲ ದಾಖಲೆಗಳ ಪರಿಶೀಲನೆ ಕಾರಣಕ್ಕೆ ವಿಳಂಬವಾಗುತ್ತದೆ. ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ಪ್ರಮಾಣಪತ್ರಗಳ ಭೌತಿಕ ಪರಿಶೀಲನೆಗಾಗಿ ಬಿಇಒ, ಪದವಿಪೂರ್ವ ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳಬೇಕಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಮೀಸಲಾತಿ ಸೌಲಭ್ಯ ಕೋರಿ, ಪ್ರತಿ ವರ್ಷ ಕನಿಷ್ಠ 1.5 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. 2025ರಲ್ಲಿ 1.70 ಲಕ್ಷ ಅಭ್ಯರ್ಥಿಗಳು ಇದ್ದರು. ಈಚೆಗೆ ನಡೆದ ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ ಪರೀಕ್ಷೆಗೆ 6.5 ಲಕ್ಷ ಅರ್ಜಿಗಳು ಬಂದಿದ್ದು, ಕನಿಷ್ಠ 3.5 ಲಕ್ಷ ಅಭ್ಯರ್ಥಿಗಳು ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಮೀಸಲಾತಿ ಕೋರಿದ್ದರು. ಸರ್ಕಾರ ಈ ಪ್ರಮಾಣಪತ್ರಗಳನ್ನು ಶಾಶ್ವತ ಆದಾಯ ದಾಖಲೆ (ಆರ್‌ಡಿ) ಸಂಖ್ಯೆಯೊಂದಿಗೆ ವಿತರಿಸಿದರೆ ಸಿಇಟಿ ಮಾತ್ರವಲ್ಲದೇ ಎಲ್ಲ ನೇಮಕಾತಿ ಪ್ರಕ್ರಿಯೆಗಳಿಗೂ ಬಳಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಇದೇ ರೀತಿ ತೆಲುಗು, ತುಳು, ತಮಿಳು ಮತ್ತು ಕೊಡವ ಸೇರಿದಂತೆ ಇತರೆ ಮಾತೃಭಾಷಾ ಪ್ರಮಾಣಪತ್ರಗಳನ್ನೂ ಸೇವಾ ಸಿಂಧು ಮೂಲಕ ನೀಡಲು ಕೆಇಎ ಕೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.