ADVERTISEMENT

‘ಖಾಸಗಿ ವಿಶ್ವವಿದ್ಯಾಲಯಗಳು ಒಪ್ಪಿದರೆ ಕೆಇಎಯಿಂದ ಸಿಇಟಿ’

ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 21:09 IST
Last Updated 30 ಜೂನ್ 2022, 21:09 IST
   

ಬೆಂಗಳೂರು: ‘ರಾಜ್ಯದ ಎಲ್ಲ ಖಾಸಗಿ ವಿಶ್ವವಿದ್ಯಾಲಯಗಳು ಒಪ್ಪುವುದಾದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ (ಕೆಇಎ) ರಾಷ್ಟ್ರಮಟ್ಟದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು ಸರ್ಕಾರ ಸಿದ್ಧ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಎಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿರುವ ರಾಜ್ಯದ ಎಲ್ಲ ಖಾಸಗಿ ವಿಶ್ವವಿದ್ಯಾಲಯಗಳ ಕುಲಪತಿಗಳು, ಕುಲಾಧಿಪತಿಗಳು ಮತ್ತು ಕುಲಸಚಿವರ ಸಭೆಯಲ್ಲಿ ಗುರುವಾರ ಅವರು ಮಾತನಾಡಿದರು.‌

ಸದ್ಯ ಆಡಳಿತ ಮಂಡಳಿಯ ಕೋಟಾದ ಎಂಜಿನಿಯರಿಂಗ್ ಸೀಟುಗಳ ಭರ್ತಿಗೆ ಖಾಸಗಿ ವಿಶ್ವವಿದ್ಯಾಲಯಗಳು ಪ್ರತ್ಯೇಕವಾದ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತಿವೆ.

ADVERTISEMENT

‘ಖಾಸಗಿ ವಿಶ್ವದ್ಯಾಲಯಗಳು ಸರ್ಕಾರಿ ಕೋಟಾದ ಎಂಜಿನಿಯರಿಂಗ್ ಸೀಟುಗಳನ್ನು ಸಿಇಟಿ ರ‍್ಯಾಂಕ್‌ ಮೇಲೆ ಭರ್ತಿ ಮಾಡಿಕೊಳ್ಳುತ್ತಿವೆ. ಆದರೆ, ಶೇ 60ರಷ್ಟು ಆಡಳಿತ ಮಂಡಳಿಯ ಸೀಟುಗಳನ್ನು ತಮ್ಮದೇ ಪ್ರತ್ಯೇಕ ಸಿಇಟಿ ಮೂಲಕ ವಿಶ್ವದ್ಯಾಲಯ
ಗಳು ಭರ್ತಿ ಮಾಡಿಕೊಳ್ಳುತ್ತಿವೆ. ಈ ರೀತಿ ಪ್ರತ್ಯೇಕ ಸಿಇಟಿಗಳಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಇದರ ಜತೆಗೆ ಒಂದೇ ಸಿಇಟಿ ಮಾಡುವಂತೆ ಸುಪ್ರೀಂ ಕೋರ್ಟ್ ಕೂಡ ಅಭಿಪ್ರಾಯ ವ್ಯಕ್ತಪಡಿಸಿದೆ. ಎಲ್ಲ ವಿಶ್ವವಿದ್ಯಾಲಯಗಳು ಸೇರಿಕೊಂಡು ಪ್ರತ್ಯೇಕ ಸಿಇಟಿ ಮಾಡಿಕೊಳ್ಳಿ’ ಎಂದು ಸಚಿವರು ಸಲಹೆ ನೀಡಿದರು.

ಪಿಇಎಸ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ. ಜವಾಹರ, ‘ಕೆಇಎಯಿಂದಲೇ ರಾಷ್ಟ್ರ ಮಟ್ಟದಲ್ಲಿ ಒಂದೇ ಸಿಇಟಿ ಮಾಡುವುದಾದರೆ ನಮ್ಮದೇನೂ ಅಭ್ಯಂತರ ಇಲ್ಲ’ ಎಂದರು. ಆಗ ಸಚಿವರು, ‘ಎಲ್ಲ ವಿಶ್ವವಿದ್ಯಾಲಯಗಳು ಸಮಾಲೋಚಿಸಿ ನಿರ್ಧಾರಕ್ಕೆ ಬಂದರೆ ಸೂಕ್ತ’ ಎಂದು ಸಲಹೆ
ನೀಡಿದರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.