ADVERTISEMENT

ಕೇರಳದಲ್ಲಿ ಮುಷ್ಕರ: ರಾಜ್ಯದಿಂದ ಹೆಚ್ಚುವರಿ ಬಸ್‌

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 20:10 IST
Last Updated 24 ಜೂನ್ 2019, 20:10 IST
   

ಬೆಂಗಳೂರು: ಕೇರಳದಲ್ಲಿ ಅಂತರ ರಾಜ್ಯ ಖಾಸಗಿ ಬಸ್‌ ಮಾಲೀಕರ ಸಂಘ ಸೋಮವಾರದಿಂದ ಮುಷ್ಕರ ಆರಂಭಿಸಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಕೇರಳ ಮತ್ತು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳು ಹೆಚ್ಚುವರಿ ಬಸ್‌ ಸೇವೆ ಆರಂಭಿಸಿವೆ.

ಕೇರಳದ ಸಾರಿಗೆ ಇಲಾಖೆ ಖಾಸಗಿ ಬಸ್‌ಗಳ ಮೇಲೆ ಭಾರೀ ಪ್ರಮಾಣದ ದಂಡ ವಿಧಿಸುತ್ತಿರುವುದನ್ನು ಪ್ರತಿಭಟಿಸಿ ಮಾಲೀಕರ ಸಂಘ ಮುಷ್ಕರ ಆರಂಭಿಸಿದೆ. ಕೇರಳ ಸಾರಿಗೆ ಸಚಿವ ಎ.ಕೆ.ಶಶಿಧರನ್‌ ಅವರು ಬಸ್‌ ನಿರ್ವಾಹಕರ ಸಂಘದ ಜತೆ ನಡೆಸಿದ ಮಾತುಕತೆ ಫಲ ನೀಡಲಿಲ್ಲ.

ಕೇರಳದಿಂದ ಪ್ರತಿ ದಿನ 400 ಅಂತರ ರಾಜ್ಯ ಬಸ್‌ಗಳು ಸಂಚರಿಸುತ್ತವೆ‌. ಅದರಲ್ಲಿ 250 ಬಸ್ಸುಗಳು ಕರ್ನಾಟಕಕ್ಕೇ ಬರುತ್ತವೆ. ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಮಣಿಪಾಲಕ್ಕೆ ಸಂಚರಿಸುತ್ತವೆ.

ADVERTISEMENT

ಮುಷ್ಕರದ ಕಾರಣ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೆಂಗಳೂರಿಗೆ 13 ಹೆಚ್ಚುವರಿ ಬಸ್‌ ಸಂಚಾರದ
ವ್ಯವಸ್ಥೆ ಮಾಡಿದೆ. ‘ಪ್ರಯಾಣಿಕರ ಬೇಡಿಕೆಯನ್ನು ಆಧರಿಸಿ ಬಸ್‌ಗಳ ಕಾರ್ಯಾಚರಣೆ ಇನ್ನು ಹೆಚ್ಚಿಸಲು ಸಿದ್ಧರಿದ್ದೇವೆ’ ಎಂದು ಕೇರಳ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ತಿರುವನಂತಪುರದಿಂದ ಬೆಂಗಳೂರಿಗೆ ಲಕ್ಸುರಿ ಬಸ್‌ ಟಿಕೆಟ್‌ ದರ ₹1,200, ವಿಮಾನದಲ್ಲಿ ₹2,500 ಬಸ್‌ ಮುಷ್ಕರದಿಂದ ಎರಡರಲ್ಲೂ ಟಿಕೆಟ್‌ ದರ ಶೇ 30 ರಿಂದ 40 ರಷ್ಟು ಏರಿಕೆಯಾಗಿದೆ.

ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್‌: ಮುಷ್ಕರದ ಕಾರಣಕೆಎಸ್‌ಆರ್‌ಟಿಸಿ ಕೇರಳಕ್ಕೆ ಬೆಂಗಳೂರಿನಿಂದ ಹೆಚ್ಚುವರಿ ಬಸ್ ಸಂಚಾರ ಆರಂಭಿಸಿದೆ.

ಲಭ್ಯವಿರುವ ಅಂತರ ರಾಜ್ಯ ಪರ್ಮಿಟ್‌ಗಳನ್ನು ಆಧರಿಸಿ, ಎರ್ನಾಕುಲಂ, ತ್ರಿಶೂರ್, ಕಣ್ಣನೂರ್ ಮತ್ತು ಪಾಲಕ್ಕಾಡ್‌ನಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್ ಸಂಚಾರ ಆರಂಭಿಸಲಾಗುವುದು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.