ADVERTISEMENT

ಶಿಕ್ಷಕರ ನೇಮಕಾತಿ: ಸರ್ಕಾರಕ್ಕೆ ಕೆಎಟಿ ನೋಟಿಸ್

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2023, 15:59 IST
Last Updated 27 ಅಕ್ಟೋಬರ್ 2023, 15:59 IST
   

ಬೆಂಗಳೂರು: ಶಿಕ್ಷಕರ ನೇಮಕಾತಿಯಲ್ಲಿ ಕೆಲವು ಅಭ್ಯರ್ಥಿಗಳ ತಂದೆಯ ಆದಾಯ ಪ್ರಮಾಣ ಪತ್ರ ಪರಿಗಣಿಸದೇ ಇರುವುದನ್ನು ಆಕ್ಷೇಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ (ಕೆಎಟಿ) ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಬೆಂಗಳೂರಿನ ಬಿಳೇಕಹಳ್ಳಿ ಚೈತ್ರಾ ಸೇರಿದಂತೆ ಒಟ್ಟು 22 ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಂಗ ಸದಸ್ಯ ನಾರಾಯಣ ಮತ್ತು ಆಡಳಿತ ಸದಸ್ಯ ಎಸ್.ಶಿವಸೈಲಂ ಅವರಿದ್ದ ಪೀಠವು ಪ್ರತಿವಾದಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಅಂತಿಮ ವಿಚಾರಣೆಯನ್ನು ನವೆಂಬರ್ 6ಕ್ಕೆ ನಿಗದಿಪಡಿಸಿದೆ. ‘ನೇಮಕಾತಿ ನಡೆದರೆ ಅದು ಈ ಅರ್ಜಿಯ ಅಂತಿಮ ತೀರ್ಪಿಗೆ ಒಳಪಡುತ್ತದೆ’ ಎಂದು ಆದೇಶಿಸಿದೆ. ಅರ್ಜಿದಾರರ ಪರ ಕೆ.ಸತೀಶ್ ಭಟ್ ವಾದ ಮಂಡಿಸಿದರು.

ADVERTISEMENT

ಇದೇ 12ರಂದು ಹೈಕೋರ್ಟ್ ನೇಮಕಾತಿಗೆ ಹಸಿರು ನಿಶಾನೆ ತೋರಿತ್ತು. ‘ಅಭ್ಯರ್ಥಿಗಳು ತಮ್ಮ ತಂದೆಯ ಆದಾಯ ಪ್ರಮಾಣ ಪತ್ರದ ಕುರಿತಾದ ತಕರಾರನ್ನು ಕೆಎಟಿ ಮುಂದೆ ಮಂಡಿಸಿ ಪರಿಹಾರ ಪಡೆದುಕೊಳ್ಳಬಹುದು’ ಎಂದು ಆದೇಶಿಸಿತ್ತು.

ಕೋರಿಕೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇದೇ 19ರಂದು ಕೌನ್ಸೆಲಿಂಗ್‌ಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಅರ್ಜಿದಾರರ ಹೆಸರನ್ನು ಸೇರ್ಪಡೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮಧ್ಯಂತರ ಕೋರಿಕೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.