ADVERTISEMENT

ಸರ್ಕಾರಿ ಜಮೀನುಗಳ ಒತ್ತುವರಿ: SIT ರದ್ದು ಕೋರಿ ಹೈಕೋರ್ಟ್‌ಗೆ ಎಚ್‌ಡಿಕೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 23:48 IST
Last Updated 17 ಜೂನ್ 2025, 23:48 IST
ಎಚ್‌ಡಿಕೆ
ಎಚ್‌ಡಿಕೆ   

ಬೆಂಗಳೂರು: ರಾಮನಗರ ತಾಲ್ಲೂಕು ಬಿಡದಿ ಹೋಬಳಿಯ ಕೇತಗಾನಹಳ್ಳಿ ಸರ್ಕಾರಿ ಜಮೀನುಗಳ ಒತ್ತುವರಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಮೀನಿನ ಮಾಲೀಕತ್ವ ಕುರಿತಂತೆ ವಿಚಾರಣೆ ನಡೆಸಲು ತನಿಖಾ ತಂಡ (ಎಸ್‌ಐಟಿ) ರಚಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

‘ಎಸ್‌ಐಟಿ ರಚಿಸಿರುವ ಸರ್ಕಾರದ ಆದೇಶದ ನಂತರ ಕಂದಾಯ ಇಲಾಖೆ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳನ್ನು ಅಕ್ರಮ ಎಂದು ಘೋಷಿಸಬೇಕು. ಈ ಸಂಬಂಧ ಮೇ 29ರಂದು ನೀಡಿರುವ ಸಮನ್ಸ್‌ ರದ್ದುಪಡಿಸಬೇಕು. ಎಸ್‌ಐಟಿ ರಚಿಸಿ ಆದೇಶ ಹೊರಡಿಸಿದ ಬಳಿಕ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ, ಇದರ ಭಾಗವಾಗಿ ಕೈಗೊಂಡಿರುವ ಕ್ರಮಗಳು ಕಾನೂನ ಬಾಹಿರವಾಗಿವೆ’ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಕೇತಗಾನಗಳ್ಳಿಯ ವಿವಿಧ ಸರ್ವೇ ನಂಬರ್‌ಗಳನ್ನು ಒಳಗೊಂಡ 14 ಎಕರೆ ಜಮೀನಿನ ಮಾಲೀಕತ್ವದ ಕುರಿತಂತೆ ವಿಚಾರಣೆ ನಡೆಸಲು ಐಎಎಸ್‌ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್‌ ನೇತೃತ್ವದಲ್ಲಿ 2025ರ ಜನವರಿ 28ರಂದು ಎಸ್‌ಐಟಿ ರಚಿಸಿ ಆದೇಶಿಸಲಾಗಿದೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.