ADVERTISEMENT

12 ಜಿಲ್ಲೆಗಳಿಗೆ ಹರಡಿದ ಮಂಗನ ಕಾಯಿಲೆ: ಕೆಎಫ್‌ಡಿ ಪೀಡಿತರ ಸಂಖ್ಯೆ 200ಕ್ಕೆ ಏರಿಕೆ

ಚಂದ್ರಹಾಸ ಹಿರೇಮಳಲಿ
Published 14 ಏಪ್ರಿಲ್ 2020, 2:46 IST
Last Updated 14 ಏಪ್ರಿಲ್ 2020, 2:46 IST
   

ಶಿವಮೊಗ್ಗ: ಲಾಕ್‌ಡೌನ್‌ನಿಂದಾಗಿ ಹೆಚ್ಚಿನ ಜನರು ಮನೆಯಲ್ಲಿದ್ದರೂ ಮಂಗನ ಕಾಯಿಲೆ ವೇಗವಾಗಿ ಹಬ್ಬುತ್ತಿದೆ. ಕೆಎಫ್‌ಡಿ ಪೀಡಿತರ ಸಂಖ್ಯೆ 200ರ ಗಡಿ ಸಮೀಪಿಸಿದೆ. ರಾಜ್ಯದ 12 ಜಿಲ್ಲೆ, ದೇಶದ ನಾಲ್ಕು ರಾಜ್ಯಗಳಲ್ಲಿ ಕಾಯಿಲೆ ಪಸರಿಸಿದೆ.

1957ರಲ್ಲಿ ಸೊರಬ ತಾಲ್ಲೂಕಿನ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡು, ಕೆಎಫ್‌ಡಿ ಎಂದೇ ಕರೆಯುವ ಈ ಕಾಯಿಲೆ, ದಶಕಗಳ ಕಾಲ ಶಿವಮೊಗ್ಗ ಜಿಲ್ಲೆಯ ಕೆಲ ಭಾಗಗಳಿಗೆ ಸೀಮಿತವಾಗಿತ್ತು. ಈಗ 12 ಜಿಲ್ಲೆಗಳಿಗೆ ವ್ಯಾಪಿಸಿದೆ.

ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರು, ಕೊಡಗು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಗದಗ, ಹಾವೇರಿ, ಬೆಳಗಾವಿ ಜಿಲ್ಲೆಗಳಲ್ಲೂ ಕೆಎಫ್‌ಡಿ ಕಾಣಿಸಿವೆ. ನೆರೆಯ ಗೋವಾದ ಮಾಪುಸಾ, ವಾಲ್ಪೊಯಿ, ಮಹಾರಾಷ್ಟ್ರದ ಸಿಂಧುದುರ್ಗ, ಕೇರಳದವಯನಾಡು, ಮಲಪ್ಪುರಂ ಭಾಗಗಳಲ್ಲಿ ಪ್ರಕರಣಗಳು ಬೆಳಕಿಗೆ ಬಂದಿವೆ. ಕಾಡುಪ್ರಾಣಿಗಳು, ಪಕ್ಷಿ,ಅರಣ್ಯ ಉತ್ಪನ್ನಗಳ ಜತೆ ಉಣುಗುಗಳಿಂದಲೂ ಪ್ರಸರಣವಾಗಿರಬಹುದು ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ADVERTISEMENT

16 ಮಕ್ಕಳಲ್ಲಿ ಕೆಎಫ್‌ಡಿ: ಈ ಬಾರಿ 14 ವರ್ಷದ ಒಳಗಿನ 16 ಮಕ್ಕಳಲ್ಲಿಕೆಎಫ್‌ಡಿಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಪ್ರತಿವರ್ಷ ಕಾಯಿಲೆಗೆ ತುತ್ತಾದವರಲ್ಲಿ ಶೇ 2ರಷ್ಟು ಮಕ್ಕಳು ಇರುತ್ತಿದ್ದರು. ಈ ಬಾರಿ ಪ್ರಮಾಣ ಶೇ 8ಕ್ಕೇರಿದೆ. ಹಿಂದಿನ ವರ್ಷ 400 ಜನರಲ್ಲಿ 8 ಮಕ್ಕಳಲ್ಲಿ ಕಾಯಿಲೆ ಕಾಣಿಸಿಕೊಂಡಿತ್ತು.

‘ನಿರ್ಬಂಧದ ಕಾರಣ ಹೊರ ಜಿಲ್ಲೆಗಳಲ್ಲಿ ನೆಲೆಸಿದ್ದ ಕುಟುಂಬಗಳು ಮಲೆನಾಡಿಗೆ ಮರಳಿರುವುದು, ಮಕ್ಕಳು ಅರಣ್ಯದಲ್ಲಿ ಸುತ್ತಿರುವುದು ಕಾಯಿಲೆ ಕಾಣಿಸಿಕೊಳ್ಳಲು ಕಾರಣ ಇರಬಹುದು’ ಎನ್ನುತ್ತಾರೆ ಪರಿಮಾಣು ಕ್ರಿಮಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಕಿರಣ್.

ಬೆಂಗಳೂರಿನಲ್ಲಿ ಸಭೆ ನಾಳೆ

ಸಾಗರ: ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಎಫ್‌ಡಿ ಪ್ರಕರಣಗಳ ನಿಯಂತ್ರಣ ಕುರಿತ ಚರ್ಚೆಗೆ ಏ.15ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಸಿದ್ದಾಪುರ: ಮತ್ತೆ ನಾಲ್ವರಿಗೆ ದೃಢ

ಸಿದ್ದಾಪುರತಾಲ್ಲೂಕಿನಲ್ಲಿ ಮಂಗನ ಕಾಯಿಲೆ(ಕೆಎಫ್‌ಡಿ)ಯ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, ಭಾನುವಾರ ಮತ್ತೆ ನಾಲ್ವರಲ್ಲಿ ಕೆಎಫ್‌ಡಿ ದೃಢಪಟ್ಟಿದೆ. ಇದರಿಂದ ಮಂಗನ ಕಾಯಿಲೆ ಪೀಡಿತರ ಸಂಖ್ಯೆ ತಾಲ್ಲೂಕಿನಲ್ಲಿ 31ಕ್ಕೇರಿದೆ.

‘ಕೆಎಫ್‌ಡಿ ಕಾಣಿಸಿರುವ ಪ್ರದೇಶದಲ್ಲಿ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಈ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲಾಗಿದೆ. ಪುನಃ ಸಭೆ ನಡೆಸಿ, ಅರಿವು ನೀಡಲಾಗುತ್ತದೆ’ ಎಂದು ತಹಶೀಲ್ದಾರ್ ಮಂಜುಳಾ ಭಜಂತ್ರಿ ಪ್ರತಿಕ್ರಿಯಿಸಿದ್ದಾರೆ.

ಕೆಎಫ್‌ಡಿ ದೃಢಪಟ್ಟವರು
ಶಿವಮೊಗ್ಗ: 146
ಉತ್ತರ ಕನ್ನಡ: 41
ಚಿಕ್ಕಮಗಳೂರು: 10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.